ವಯನಾಡ್: ಎನ್‌ಕೌಂಟರ್‌ನಲ್ಲಿ ಮಾವೋವಾದಿ ಹತ್ಯೆ

Update: 2020-11-03 17:04 GMT

ವಯನಾಡ್, ನ, 3: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಕೇರಳ ಪೊಲೀಸ್ ಪಡೆಯ ಥಂಡರ್‌ಬೋಲ್ಟ್ ಕಮಾಂಡೊ ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ಮಾವೊವಾದಿ ಮೃತಪಟ್ಟ ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಈ ಎನ್‌ಕೌಂಟರ್ ನಡೆದಿದೆ ಎನ್ನಲಾಗಿದೆ. ಬಣಾಸುರಮಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಥಂಡರ್‌ಬೋಲ್ಟ್‌ ಕಮಾಂಡೊಗಳು ವಾಡಿಕೆಯಂತೆ ಗಸ್ತು ತಿರುಗುತ್ತಿದ್ದ ವೇಳೆ ಮೂವರು ಮಾವೊವಾದಿಗಳನ್ನು ಗುರುತಿಸಿದ್ದಾರೆ. ಈ ಸಂದರ್ಭ ಕಮಾಂಡೊಗಳು ಮತ್ತು ಶಂಕಿತ ಮಾವೊವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಯನ್ನು ತಮಿಳುನಾಡು ಮೂಲದವನೆಂದು ಶಂಕಿಸಿಲಾಗಿದೆ. 

ಘಟನಾ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ.

ಕಳೆದ ವರ್ಷ ವಯನಾಡಿನ ವೈತಿರಿ ಬಳಿಯ ಲಕ್ಕಿಡಿಯ ರೆಸಾರ್ಟ್‌ನಲ್ಲಿ ಮಾವೋವಾದಿ ಸ್ಥಳೀಯ ಮುಖಂಡ ಸಿ.ಪಿ ಜಲೀಲ್‌ನನ್ನು ಹತ್ಯೆ ಮಾಡಲಾಗಿತ್ತು.

ಕೇರಳ ಮತ್ತು ತಮಿಳುನಾಡು ಗಡಿಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇದ್ದಾರೆ ಎಂಬ ಶಂಕೆ ಮೊದಲಿನಿಂದಲೂ ಇದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಕೇರಳದ ಪಾಲಕ್ಕಾಡಿನ ಮಂಚಕಟ್ಟಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಥಂಡರ್ ಬೋಲ್ಟ್ ಕಮಾಂಡೊ ಪಡೆ, ನಾಲ್ವರು ನಕ್ಸಲರನ್ನು ಹತ್ಯೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News