ಮಾಲಿ: ಫ್ರಾನ್ಸ್ ವಾಯುದಾಳಿಯಲ್ಲಿ 50 ಕ್ಕೂ ಅಧಿಕ ಅಲ್-ಖಾಯಿದ ಉಗ್ರರು ಹತ

Update: 2020-11-03 17:55 GMT

ಬಮಾಕೊ (ಮಾಲಿ), ನ. 3: ತನ್ನ ಪಡೆಗಳು ಮಾಲಿ ದೇಶದಲ್ಲಿ ನಡೆಸಿದ ವಾಯು ದಾಳಿಗಳಲ್ಲಿ ಅಲ್-ಖಾಯಿದಾಕ್ಕೆ ಸೇರಿದ 50ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಫ್ರಾನ್ಸ್ ಸರಕಾರ ಸೋಮವಾರ ತಿಳಿಸಿದೆ.

 ಬುರ್ಕಿನ ಫಾಸೊ ಮತ್ತು ನೈಜರ್ ದೇಶಗಳೊಂದಿಗೆ ಮಾಲಿ ಹೊಂದಿರುವ ಗಡಿಯ ಸಮೀಪ ಶುಕ್ರವಾರ ದಾಳಿ ನಡೆಯಿತು ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ತಿಳಿಸಿದರು. ಮಾಲಿಯ ಪರಿವರ್ತನಾ ಸರಕಾರದ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಈ ವಿಷಯವನ್ನು ಪ್ರಕಟಿಸಿದರು.

‘‘ಮಾಲಿಯಲ್ಲಿ ಅಕ್ಟೋಬರ್ 30ರಂದು ಬರ್ಖಾನ್ ಪಡೆಗಳು ವಾಯು ದಾಳಿ ನಡೆಸಿದ್ದು, 50ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ. ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ಪಾರ್ಲಿ ತಿಳಿಸಿದರು.

ಫ್ರಾನ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ‘ಬರ್ಖಾನ್ ಕಾರ್ಯಾಚರಣೆ’ ಎಂದು ಕರೆಯಲಾಗುತ್ತಿದೆ.

ಮೂರು ದೇಶಗಳ ಗಡಿ ಪ್ರದೇಶದಲ್ಲಿ ಮೋಟರ್‌ಸೈಕಲ್‌ಗಳ ಉದ್ದನೆಯ ಸಾಲನ್ನು ಡ್ರೋನ್ ಪತ್ತೆಹಚ್ಚಿದ ಬಳಿಕ, ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಅವರು ಹೇಳಿದರು.

ಡ್ರೋನ್ ಕಣ್ಗಾವಲನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಭಯೋತ್ಪಾದಕರು ಮರಗಳ ಅಡಿಗೆ ಸರಿದಾಗ, ಫ್ರಾನ್ಸ್ ಪಡೆಯು ಎರಡು ಮಿರಾಜ್ ಯುದ್ಧವಿಮಾನಗಳನ್ನು ಕಳುಹಿಸಿತು ಹಾಗೂ ಆ ದಾಳಿಯಲ್ಲಿ ಭಯೋತ್ಪಾದಕರು ಹತರಾದರು ಎಂದು ಪಾರ್ಲಿ ಹೇಳಿದರು.

ನಾಲ್ಕು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಸೇನಾ ವಕ್ತಾರ ಕರ್ನಲ್ ಫ್ರೆಡರಿಕ್ ಬಾರ್‌ಬ್ರೈ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News