ಬಿಜೆಪಿಯಿಂದ ದ.ಕ. ಜಿಲ್ಲೆಯ ಅಸ್ಮಿತೆಗೆ ಧಕ್ಕೆ: ಮುಹಮ್ಮದ್ ಬಡಗನ್ನೂರು

Update: 2020-11-04 07:49 GMT

ಮಂಗಳೂರು, ನ.4: ಕರಾವಳಿಯ ಹೆಮ್ಮೆಯ ಸಾರ್ವಜನಿಕ ಸ್ವಾಮ್ಯದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿರುವುದು, ಜಿಲ್ಲೆಯ ಹೆಗ್ಗುರುತಾಗಿದ್ದ ಮುಲ್ಕಿ ಸುಂದರಾಮ ಶೆಟ್ಟಿಯವರಿಂದ ಸ್ಥಾಪನೆಯಾದ ವಿಜಯ ಬ್ಯಾಂಕ್ ನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಇರುವುದು ಹಾಗೂ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಬಿಜೆಪಿ ನೇತೃತ್ವದ ಸರಕಾರ ಹಾಗೂ ಅದರ ಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಈ ವೈಫಲ್ಯದಿಂದ ಜಿಲ್ಲೆಯ ಅಸ್ಮಿತೆಗೆ ಧಕ್ಕೆಯಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಡಗನ್ನೂರು ಮುಹಮ್ಮದ್ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ಪ್ರಥಮ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರಾದ ಪಂಡಿತ್ ಎಂದು ಜವಹರಲಾಲ್ ನೆಹರು ಅವರಿಂದ ಸ್ಥಾಪನೆಯಾದ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿಗೆ ಗುತ್ತಿಗೆ ನೀಡಿ ಜರ್ಮನಿಯ ಕಂಪೆನಿಯ ಮೂಲಕ ನಡೆಸಲು ಸರಕಾರ ಮುಂದಾಗಿದೆ ಇದರಿಂದ ಜಿಲ್ಲೆಯ ಅಸ್ಮಿತೆಗೆ ಧಕ್ಕೆಯಾಗಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರಿದ್ದರೂ ಜನರ ಸಮಸ್ಯೆಗೆ ಪರಿಹಾರ ದೊರಕದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಅಭಿಷೇಕ್ ಉಳ್ಳಾಲ್ ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಆಯೋಜಿಸಿದ್ದ ತುಳುಭಾಷೆಯ ಬಗೆಗಿನ ಅಂತಾರಾಷ್ಟ್ರೀಯ ವೆಬ್‌ನಾರ್ ನ್ನು ಏಕಾಏಕಿ ರದ್ದುಪಡಿಸುವ ಮೂಲಕ ಹಿರಿಯ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆಯವರಿಗೆ ಅವಮಾನ ಮಾಡಿರುವುದರ ಖಂಡನೀಯ. ಈ ಬಗ್ಗೆ ಎಬಿವಿಪಿ ಏಕೆ ಮೌನವಹಿಸಿದೆ ಎಂದು ಪ್ರಶ್ನಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿನ ಲೋಪ, ಅಧಿಕಾರ ದುರುಪಯೋಗ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ನಡುವೆ ಹಿಂದಿನ ಕುಲಸಚಿವ ಎ.ಎಂ.ಖಾನ್ ಮೇಲೆ ಸಾಕಷ್ಟು ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಕೊರೋನ ಸಂದರ್ಭದಲ್ಲಿ ಒಂದೇ ಕಾಲೇಜಿನ 13 ಉಪನ್ಯಾಸಕರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇಂತಹ ಸಮಸ್ಯೆಗಳಿಗೆ ವಿಶ್ವವಿದ್ಯಾಲಯದಿಂದ ಪರಿಹಾರ ದೊರೆಯುತ್ತಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ವಸಂತ್ ಬೆರ್ನಾಡ್, ಪ್ರೇಮ್ ಬಲ್ಲಾಳ್ ಬಾಗ್, ನೀರಜ್ ಚಂದ್ರ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News