×
Ad

ಸಿಎಂ ಹೆಸರಿನ ನಕಲಿ ಇ ಮೇಲ್ ಐಡಿಯಿಂದ ಮಣಿಪಾಲ ಮಾಹೆಗೆ ಇ ಮೇಲ್ ಸಂದೇಶ: ಪ್ರಕರಣ ದಾಖಲು

Update: 2020-11-04 13:30 IST

ಉಡುಪಿ, ನ.4: ಕಿಡಿಗೇಡಿಯೊಬ್ಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ನಕಲಿ ಇಮೇಲ್ ಐಡಿ ಸೃಷ್ಟಿಸಿ ಮಣಿಪಾಲ ಮಾಹೆಯ ಕುಲಸಚಿವರಿಗೆ ಇ ಮೇಲ್ ಸಂದೇಶ ಕಳುಹಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.1ರಂದು ಅಪರಿಚಿತ ವ್ಯಕ್ತಿ ‘ಸಿಎಂ ಕರ್ನಾಟಕ’ ಎಂಬ ನಕಲಿ ಮೇಲ್ ಐಡಿ ಯನ್ನು ಸೃಷ್ಟಿಸಿ, ಅದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಂಬುದಾಗಿ ಬರೆದು, ಮುಖ್ಯಮಂತ್ರಿ ಕಚೇರಿಯಿಂದಲೇ ಮೇಲ್ ಕಳುಹಿಸಿದ ರೀತಿಯಲ್ಲಿ, ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ಕುಲಸಚಿವ ಡಾ.ನಾರಾಯಣ ಸಭಾಹಿತ್ ಇವರ ರಿಜಿಸ್ಟಾರ್ ವಿಭಾಗದ ಮೇಲ್ ಐಡಿಗೆ ಇಮೇಲ್ ಸಂದೇಶ ಕಳುಹಿಸಿರುವುದಾಗಿ ದೂರಲಾಗಿದೆ.

ಈ ಸಂದೇಶದಲ್ಲಿ ‘ಮಾಹೆಯ ಶಿಕ್ಷಣ ಸಂಸ್ಥೆಗಳನ್ನು ಪುನಾರಂಭಿಸುವುದರ ವಿರುದ್ಧ ಇಲ್ಲಿನ ವಿವಿಧ ದೇಶಗಳ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಹಲವು ಇಮೇಲ್ ಮತ್ತು ದೂರುಗಳು ಬಂದಿದ್ದು, ಕಾಲೇಜುಗಳನ್ನು ನವೆಂಬರ್/ಡಿಸೆಂಬರ್‌ನಲ್ಲಿ ಪುನಾರಂಭಿಸಲು ಪರಿಸ್ಥಿತಿ ಸೂಕ್ತವಾಗಿಲ್ಲ. ಆದುದರಿಂದ 2021ರ ಜ.2ವರೆಗೆ ತರಗತಿ ಆರಂಭಿಸಬಾರದು. ಒಂದು ವೇಳೆ ಜ.2ರಿಂದ ಪ್ರಾರಂಭಿಸಬೇಕಾದರೆ ವಿದ್ಯಾರ್ಥಿಗಳ ಪೋಷಕರಿಂದ ಒಪ್ಪಿಗೆ ಪಡೆಯಬೇಕು’ ಎಂಬುದಾಗಿ ತಿಳಿಸಲಾಗಿದೆ.

ಈ ರೀತಿ ದುಷ್ಕರ್ಮಿ, ಮುಖ್ಯಮಂತ್ರಿಯವರ ಇಮೇಲ್ ಐಡಿಯನ್ನು ಕದ್ದು, ಅದೇ ರೀತಿಯಾಗಿ ಸುಳ್ಳು ಇ-ಮೇಲ್ ಐಡಿಯನ್ನು ಅವರ ಹೆಸರಿನಲ್ಲಿ ಸೃಷ್ಟಿಸಿ, ಇಮೇಲ್ ಸಂದೇಶವನ್ನು ಮುಖ್ಯಮಂತ್ರಿಯವರೇ ಕಳುಹಿಸಿರುವ ರೀತಿಯಲ್ಲಿ ಸಂಸ್ಥೆಗೆ ತಪ್ಪು ಮಾಹಿತಿಯನ್ನು ನೀಡಿ, ನಂಬಿಸಿ, ವಂಚಿಸಿರುವುದಾಗಿ ಡಾ.ನಾರಾಯಣ ಸಭಾಹಿತ್ ನೀಡಿರುವ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News