ಮಂಗಳೂರಿಗೆ ಶಿರಾಡಿ ಘಾಟ್ ಮೂಲಕ ಬನ್ನಿ: ಬಿಜೆಪಿ ನಾಯಕರಿಗೆ ಮಿಥುನ್ ರೈ ಆಗ್ರಹ

Update: 2020-11-04 17:32 GMT

ಮಂಗಳೂರು, ನ.4: ಮಂಗಳೂರಿನಲ್ಲಿ ನಡೆಯುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ದ.ಕ. ಜಿಲ್ಲೆಗೆ ಆಗಮಿಸುವ ಬಿಜೆಪಿ ಮುಖಂಡರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರವಾಗಿ ಶಿರಾಡಿ  ಘಾಟ್ ಮೂಲಕ ಆಗಮಿಸುವಂತೆ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ತೀವ್ರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಮಿಥುನ್ ರೈ, ನ.5ರಂದು ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ದಲ್ಲಿ ದ.ಕ. ಜಿಲ್ಲೆಗೆ ಆಗಮಿಸುವ ಬಿಜೆಪಿ ನಾಯಕರು, ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು ಸಕಲೇಶಪುರ ಮೂಲಕ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಮುಖಾಂತರ ಆಗಮಿಸಬೇಕು ಹಾಗೂ ಈ ರಸ್ತೆಯ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ. ಆ ಮೂಲಕ ‘ರೋಡ್ ಚಾಲೆಂಜ್’, ‘ಚಿನ್ನದ ರಸ್ತೆ’ ಎಂಬ ಮಂಗಳೂರಿನಲ್ಲಿ ಟ್ರೆಂಡಿಂಗ್ ಆಗಿರುವ ಹ್ಯಾಶ್‌ಟ್ಯಾಗ್‌ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ್ದಾರೆ.

ತೀರಾ ಹದಗೆಟ್ಟಿರುವ ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ‘ರೋಡ್ ಚಾಲೆಂಜ್’ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮಿಥುನ್ ರೈ ಈ ಹೇಳಿಕೆ ನೀಡಿದ್ದಾರೆ.

20 ವರ್ಷಗಳ ಬಳಿಕ ನ.5ರಂದು ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಮತ್ತಿತರ ನಾಯಕರು ಇದರಲ್ಲಿ ಭಾಗವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News