ಅರ್ನಬ್ ಗೋಸ್ವಾಮಿ ಬಂಧನದಿಂದ ಖುಷಿಯಾಗಿದೆ : ಅನ್ವಯ್ ನಾಯ್ಕ್ ಕುಟುಂಬ

Update: 2020-11-04 11:54 GMT

ಮುಂಬೈ : ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಬಂಧನದಿಂದ ತಮಗೆ ಖುಷಿಯಾಗಿದೆ ಎಂದು ಇಂಟೀರಿಯರ್ ಡಿಸೈನರ್ ಅನ್ವಯ್ ನಾಯ್ಕ್  ಅವರ ಕುಟುಂಬ ಸದಸ್ಯರು ಹೇಳಿದ್ದಾರೆ. ಅರ್ನಬ್ ಅವರ ಪ್ರಚೋದನೆಯಿಂದಾಗಿಯೇ ಅನ್ವಯ್ ಅವರು 2018ರಲ್ಲಿ ಆತ್ಮಹತ್ಯೆಗೈದಿದ್ದಾರೆಂಬ ಆರೋಪವನ್ನು ಕುಟುಂಬ ಈ ಹಿಂದೆಯೇ ಆರೋಪಿಸಿತ್ತು. ಈ ಪ್ರಕರಣವನ್ನು ಮುಚ್ಚಲು ತಮಗೆ ಈ ಹಿಂದೆ ಪೊಲೀಸರಿಂದ  ಬಹಳಷ್ಟು ಒತ್ತಡವಿತ್ತು ಎಂದು ಕುಟುಂಬ ಹೇಳಿದೆ.

``ರಿಪಬ್ಲಿಕ್ ಟಿವಿಯಿಂದ ಬರಬೇಕಿದ್ದ ಬಾಕಿ ಪಾವತಿಯಾಗದೇ ಇದ್ದುದೇ ತಮ್ಮ ತಂದೆ ಹಾಗೂ ಅಜ್ಜಿ ಆತ್ಮಹತ್ಯೆಗೆ ಕಾರಣ,'' ಎಂದು ಅನ್ವಯ್ ಅವರ ಪುತ್ರಿ ಆದ್ನ್ಯ ಹೇಳಿದ್ದಾರೆ. ``ಇದನ್ನು ನಾವು ರಾಜಕೀಯಗೊಳಿಸಲು ಬಯಸುವುದಿಲ್ಲ. ಈ ವಿಚಾರದಿಂದಾಗಿ ನನ್ನ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿದ್ದೇನೆ. ಅರ್ನಬ್ ಅವರಂತಹ ಪ್ರಭಾವಿ ಜನರು  ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂದು ಜನರು ತಿಳಿಯಬೇಕು, ಅವರನ್ನು ಈ ಮುಂಚೆಯೇ ಬಂಧಿಸಬೇಕಿತ್ತು,'' ಎಂದಿದ್ಧಾರೆ.

ಅರ್ನಬ್ ಗೋಸ್ವಾಮಿ ಮತ್ತಿತರ ಇಬ್ಬರ ಹೆಸರುಗಳನ್ನು ಉಲ್ಲೇಖಿಸಿ ತಮ್ಮ ಪತಿ ಸುಸೈಡ್ ನೋಟ್ ಬರೆದಿಟ್ಟಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಅನ್ವಯ್ ಅವರ ಪತ್ನಿ ಹೇಳಿದರು. ``ಸುಶಾಂತ್ ಸಿಂಗ್ ರಜಪೂತ್‍ಪ್ರಕರಣದಲ್ಲಿ ಸುಸೈಡ್ ನೋಟ್ ಇಲ್ಲದೇ ಇದ್ದರೂ ಬಂಧನಗಳು ನಡೆಯಬೇಕು ಎಂದು ಅರ್ನಬ್ ಹೇಳುತ್ತಲೇ ಇದ್ದರು. ನನ್ನ ಪತಿ ಅರ್ನಬ್ ಮತ್ತಿತರ ಇಬ್ಬರ ಹೆಸರು ಬರೆದಿರುವ ಸುಸೈಡ್ ನೋಟ್ ಬಿಟ್ಟು ಆತ್ಮಹತ್ಯೆ ಮಾಡಿದ್ದರು. ಆದರೂ ಯಾರನ್ನೂ ಬಂಧಿಸಲಾಗಿರಲಿಲ್ಲ. ಇದು ಯಾವ ನ್ಯಾಯ?,'' ಎಂದು ಆಕೆ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News