ಪಂಜಾಬಿನಲ್ಲಿ ರೈತರ ಪ್ರತಿಭಟನೆಗಳಿಂದ ರೈಲ್ವೆ ಇಲಾಖೆಗೆ 1,200 ಕೋ.ರೂ.ನಷ್ಟ

Update: 2020-11-04 14:30 GMT

ಹೊಸದಿಲ್ಲಿ,ನ.4: ಕೃಷಿ ಮಸೂದೆಗಳ ವಿರುದ್ಧ ಪಂಜಾಬಿನಲ್ಲಿ ಪ್ರತಿಭಟನೆಗಳಿಂದಾಗಿ ರೈಲ್ವೆ ಇಲಾಖೆಗೆ ಈಗಾಗಲೇ ಅಂದಾಜು 1,200 ಕೋ.ರೂ.ನಷ್ಟ ಸಂಭವಿಸಿದ್ದು, ಈಗಲೂ ರಾಜ್ಯಾದ್ಯಂತ 32 ಸ್ಥಳಗಳಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.

ಪ್ರತಿಭಟನಾಕಾರರ ತಡೆಗಳಿಂದಾಗಿ ಈವರೆಗೆ ಅಗತ್ಯ ಸರಕುಗಳನ್ನು ಹೊತ್ತಿದ್ದ 2,225ಕ್ಕೂ ಅಧಿಕ ಸರಕು ಸಾಗಣೆ ರೈಲುಗಳ ಸಂಚಾರ ಸಾಧ್ಯವಾಗಿಲ್ಲ ಮತ್ತು ಸುಮಾರು 1,350 ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆ ಮಾರ್ಗವಾಗಿ ರವಾನಿಸಲಾಗಿದೆ ಎಂದ ಅಧಿಕಾರಿಗಳು,ಪ್ಲಾಟ್‌ಫಾರ್ಮ್‌ಗಳು ಮತ್ತು ಹಳಿಗಳ ಸಮೀಪ ಪ್ರತಿಭಟನಾಕಾರರು ಧರಣಿಯನ್ನು ಮುಂದುವರಿಸಿರುವುದರಿಂದ ಇಲಾಖೆಗೆ ಆಗಿರುವ ನಷ್ಟದ ಅಂದಾಜು ಮೊತ್ತ ಈಗಾಗಲೇ 1,200 ಕೋ.ರೂ.ಗಳನ್ನು ದಾಟಿದೆ. ಜಂಡಿಯಾಲಾ,ನಭಾ,ತಲ್ವಂಡಿ ಸಾಬೊ ಮತ್ತು ಬಠಿಂಡಾಗಳಲ್ಲಿ ಈಗಲೂ ಪ್ರತಿಭಟನೆಗಳು ಮತ್ತು ರೈಲು ತಡೆಗಳು ಮುಂದುವರಿದಿವೆ ಎಂದರು. ರೈಲುಗಳ ಸಂಚಾರವನ್ನು ಪುನರಾರಂಭಿಸಲು ಹಳಿಗಳು ಮತ್ತು ಚಾಲಕ ವರ್ಗದ ಸುರಕ್ಷತೆಯ ಬಗ್ಗೆ ಭರವಸೆಯನ್ನು ಕೋರಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ ಪತ್ರವನ್ನು ಬರೆದಿದ್ದರು.

 ತನ್ಮಧ್ಯೆ,ಕೇಂದ್ರದ ಕೃಷಿ ಕಾನೂನುಗಳ ಕುರಿತಂತೆ ಸಿಂಗ್ ನೇತೃತ್ವದ ನಿಯೋಗವನ್ನು ಭೇಟಿಯಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನಿರಾಕರಿಸಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಎಂಎಲ್‌ಎಗಳು ಇಲ್ಲಿಯ ರಾಜಘಾಟ್‌ನಲ್ಲಿ ಧರಣಿಯನ್ನು ನಡೆಸಿದರು. ಸಿಂಗ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News