ಅನಿವಾಸಿ ಕೋವಿಡ್ ಯೋಧರ ಸೇವೆ ಶ್ಲಾಘನೀಯ: ಕೇಂದ್ರ ಸಚಿವ ಸದಾನಂದ ಗೌಡ

Update: 2020-11-04 15:34 GMT

ದುಬೈ: ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಯುಎಇಯಲ್ಲಿ ಕೊರೋನ ಸಂಕಷ್ಟದ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ನೋವಿಗೆ ಸ್ಪಂದಿಸಿದ ಕೋವಿಡ್ ಯೋಧರನ್ನು ಗುರುತಿಸಿ ಅಭಿನಂದಿಸುವ ಮೂಲಕ  ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಅನಿವಾಸಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಕೊರೋನ ಸಂಕಷ್ಟ ಸಂದರ್ಭದಲ್ಲಿ ಯುಎಇಯಲ್ಲಿದ್ದ ಕನ್ನಡಿಗರ ನೋವಿಗೆ ಸ್ಪಂದಿಸಿದ ಕೋವಿಡ್ ಯೋಧರ ಸೇವೆ ಶ್ಲಾಘನೀಯ, ನಾವು ರಾಜಕಾರಣಿಗಳು, ಜನಪ್ರತಿನಿಧಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವವರು, ನಿಮ್ಮ ಸೇವೆ ಮಾಡುವುದು ನಮ್ಮ ಕರ್ತವ್ಯ ಆದರೆ ಅಂತಹ ಯಾವುದೇ ಹುದ್ದೆ ಇಲ್ಲದೆಯೂ ವಿದೇಶದಲ್ಲಿ ನೀವು ಒಬ್ಬ ರಾಜ್ಯ, ಕೇಂದ್ರ ಸಚಿವರಂತೆ ಜವಾಬ್ದಾರಿ ಹೊತ್ತು ಹಗಲಿರುಳು ಅನಿವಾಸಿ ಕನ್ನಡಿಗರ ಸೇವೆ ಸಲ್ಲಿಸಿದ್ದೀರ, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.

ಕರ್ನಾಟಕದ ಮಣ್ಣಿನ ಗುಣವೇ ಇದು, ಒಬ್ಬರಿಗೊಬ್ಬರು ಪರಸ್ಪರ ಅರಿತು, ಬೆರೆತು, ಸಹಕಾರ ಮಾಡುವುದೇ ಕನ್ನಡಿಗರ ಗುಣ, ಇಂತಹಾ ಕೋವಿಡ್ ಯೋಧರನ್ನು ಕರ್ನಾಟಕ ರಾಜ್ಯೋತ್ಸವದ ದಿನದಂದು ಗುರುತಿಸಿ ಅಭಿನಂದಿಸುತ್ತಿರುವ ಆಯೋಜಕರಾದ ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ರವರಿಗೂ ಧನ್ಯವಾದಗಳು, ನಿಮಗೆ ಇಷ್ಟೇ ಭರವಸೆ ಕೊಡುತ್ತೇನೆ, ನೀವು ಯಾವಾಗ ಏನೇ ಸಹಕಾರ ಕೇಳಿದರೂ ನಮ್ಮ ಕೈಲಾದ ಸೇವೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ತಯಾರಿದೆ ಎಂದು ಭರವಸೆ ನೀಡಿದರು.

ಕನ್ನಡಿಗಾಸ್ ಫೆಡರೇಷನ್ ನ ಸಂಚಾಲಕರಾದ ಹಿದಾಯತ್ ಅಡ್ಡೂರು ಪ್ರಾಸ್ತಾವಿಕ ಭಾಷಣ ಮಾಡಿ, ಯುಎಇಯಲ್ಲಿ ಕೋವಿಡ್ ಸಂದರ್ಭದಲ್ಲಿದ್ದ ಸ್ಥಿತಿಗತಿಗಳ ಬಗ್ಗೆ ಮತ್ತು ಕೋವಿಡ್ ಯೋಧರ ಜನಸೇವೆಯ ಬಗ್ಗೆ ಮಾಹಿತಿ ನೀಡಿದರು.

ಅನಿವಾಸಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು, ಯುಎಇಯಲ್ಲಿ ಕೋವಿಡ್ ಸಂದರ್ಭ ದಲ್ಲಿ ನೆರವಿಗೆ ನಿಂತ ಕೋವಿಡ್ ಯೋಧರನ್ನು ಗೌರವಿಸಲು ನನಗೆ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು, ನಿಮ್ಮ ಸೇವೆಯ ಬಗ್ಗೆ ನಾನು ಈ ಮುಂಚೆಯೇ ಮಾಧ್ಯಮದ ಮೂಲಕ, ಸಾಮಾಜಿಕ ಜಾಲತಾಣದ ಮೂಲಕ ಓದಿ ತಿಳಿದುಕೊಂಡಿದ್ದೆ, ಹೆಮ್ಮೆಯಿದೆ ನಿಮ್ಮೆಲ್ಲರ ಬಗ್ಗೆ, ನೀವೂ ನಿಮ್ಮ ಆರೋಗ್ಯದ ಕಾಳಜಿ ಮುಂಜಾಗೃತೆ ವಹಿಸಿಯೇ ಕೆಲಸ ನಿರ್ವಹಿಸಿ, ಎಲ್ಲರಿಗೂ ಒಳಿತಾಗಲಿ'  ಎಂದು ಹಾರೈಸಿದರು.

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುವ ಮೂಲಕ ಮಾತನ್ನು ಪ್ರಾರಂಭಿಸಿದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಕಾನ್ಸುಲ್ ಜನರಲ್ ಡಾ. ಅಮನ್ ಪುರಿ,'ಕೋವಿಡ್ ಯೋಧರನ್ನು ಅಭಿನಂದಿಸುವ ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನನಗೆ ಸಂತಸವಾಗುತ್ತಿದೆ, ನಿಮ್ಮ ಜೀವವನ್ನು ಪಣಕ್ಕಿಟ್ಟು ಯುಎಇಯಲ್ಲಿ ಕೋರೋನ ಸಂದರ್ಭದಲ್ಲಿ ಯಾವುದೇ ಭೇದ ಭಾವವನ್ನು ಮಾಡದೆ ಸಂಕಷ್ಟ ದಲ್ಲಿರುವವರಿಗೆ ನೆರವಾದ ಎಲ್ಲಾ ಭಾಲತೀಯ ಸಂಘ ಸಂಸ್ಥೆಗಳಿಗೆ ಈ ಸಂದರ್ಭದಲ್ಲಿ ಹೃದಯ ಪೂರ್ವಕ ನಮನ ಸಲ್ಲಿಸುತ್ತೇನೆ. ಈ ಕಾರ್ಯಕ್ರಮ ಆಯೋಜಿಸಿ ಕೋವಿಡ್ ಯೋಧರನ್ನು ಗುರುತಿಸಿದ ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ತಂಡಕ್ಕೆ ವಿಶೇಷವಾಗಿ ಧನ್ಯವಾದ ಹೇಳ ಬಯಸುತ್ತೇನೆ' ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ "ಕೊರೋನ ಸಂದರ್ಭದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮೊಂದಿಗೆ ಇದ್ದು ಅನಿವಾಸಿ ಕನ್ನಡಿಗರ ಮನವಿಗೆ ಸ್ಪಂದಿಸುತ್ತಿದ್ದ ದಿವಂಗತ ಕೇಂದ್ರ ಸಚಿವ ಸುರೇಶ್ ಅಂಗಡಿಯವರನ್ನು ಸ್ಮರಿಸಲೇಬೇಕು, ಅವರು ನಮ್ಮನ್ನಗಲಿರುವುದು ನಮಗೆ ತುಂಬಲಾರದ ನಷ್ಟ, ಅದೇ ರೀತಿ ವಿಮಾನ ವ್ಯವಸ್ಥೆ ಮಾಡಲು ಸಹಕರಿಸಿದ್ದ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಷಿ, ಡಿಸಿಂ ಅಶ್ವಥ್ ನಾರಾಯಣ್,  ಕೋವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿರುವ ಎಲ್ಲಾ ಕನ್ನಡ ಸಂಘಟನೆಗಳಿಗೆ, ವೈಯಕ್ತಿಕವಾಗಿಯೂ ಸೇವೆ ಸಲ್ಲಿಸಿದವರಿಗೆ ಧನ್ಯವಾದ" ಎಂದು ಎಲ್ಲರನ್ನೂ ಸ್ಮರಿಸಿದರು.

ಕನ್ನಡಿಗಾಸ್ ಫೆಡರೇಷನ್ ಇದರ ಪೋಷಕರಾದ ಕೊಡುಗೈ ದಾನಿ, ಉದ್ಯಮಿ, ರೊನಾಲ್ಡ್ ಕೊಲಸೋ ಮಾತನಾಡಿ "ಯುಎಇಯಲ್ಲಿ ಕೊರೋನ ಬರುವ ಮುಂಚೆ ತುಂಬಾ ಕನ್ನಡ ಸಂಘಟನೆಗಳು ಬೇರೆ ಬೇರೆಯಾಗಿ ಕಾರ್ಯಾಚರಿಸುತ್ತಿದ್ದವು, ಆದರೆ ಕೊರೋನ ಸಂಕಷ್ಟದ ವೇಳೆಯಲ್ಲಿ ಎಲ್ಲರೂ ಒಟ್ಟಾಗಿ, ಒಗ್ಗಟ್ಟಿನಿಂದ ಒಂದೇ ವೇದಿಕೆಯಲ್ಲಿ ಜನರ ನೋವಿಗೆ ಸ್ಪಂದಿಸಿ, ಆಹಾರ, ಮೆಡಿಕಲ್ ವ್ಯವಸ್ಥೆ, ಕಾನೂನಾತ್ಮಕ ಸಹಾಯ, ಚಾರ್ಟರ್ ಫ್ಲೈಟ್, ವಂದೇ ಭಾರತ್ ಮಿಷನ್ ಟಿಕೆಟ್, ಉಚಿತ ಟಿಕೆಟ್ ವ್ಯವಸ್ಥೆ ಹೀಗೆ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸಿ ಎಲ್ಲರಿಗೂ ಮಾದರಿಯಾದರು, ಕೊರೋನ ಜನರನ್ನು ಪರಸ್ಪರ ದೈಹಿಕವಾಗಿ ದೂರಮಾಡಿದರೂ ಮನಸ್ಸಿನ ಮೂಲಕ ಹತ್ತಿರಮಾಡಿತು" ಎಂದರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ. ರಾಜೇಂದ್ರ ಕೆ ವಿ ಅವರ ಮೂಲಕ ಕನ್ನಡಿಗಾಸ್ ಫೆಡರೇಷನ್ ತಂಡ ಯುಎಇಯಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ 1ಲಕ್ಷ ರೂ. ಸಹಾಯಹಸ್ತ ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು ಕೋವಿಡ್ ಯೋಧರಾಗಿ ಸೇವೆ ಸಲ್ಲಿಸಿದ ಯುಎಇಯ ಅನಿವಾಸಿ ಕನ್ನಡಿಗರನ್ನು ಅಭಿನಂದಿಸಿದರು.

ಕನ್ನಡ ಮಿತ್ರರು ಯುಎಈ ಅಧ್ಯಕ್ಷ ಶಶಿಧರ ನಾಗರಾಜಪ್ಪ ಸ್ವಾಗತಿಸಿದರು, ಚಿತ್ರನಟಿಯರಾದ ಭಾವನಾ ರಾವ್, ಆಶಾ ಭಟ್, ದುಬೈ ಕಾನ್ಸುಲೇಟ್ ಜನರಲ್ ನ ಕಾನ್ಸುಲ್ ಉತ್ತಮ್ ಚಂದ್ ಕೋವಿಡ್ ಯೋಧರಿಗೆ ಅಭಿನಂದಿಸಿ, ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಕೋರಿದರು. ಕಾವ್ಯ ಯುವರಾಜ್  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News