×
Ad

ರಾಜ್ಯದಲ್ಲಿ ಗೋಹತ್ಯೆ ನಿಷೇಧ, ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನಿಗೆ ಬಿಜೆಪಿ ಕೋರ್ ಕಮಿಟಿ ಸಲಹೆ : ಅರವಿಂದ ಲಿಂಬಾವಳಿ

Update: 2020-11-05 16:08 IST

ಮಂಗಳೂರು, ನ. 5: ರಾಜ್ಯದಲ್ಲಿ 2008 ರಲ್ಲಿ ಬಿಜೆಪಿ ನೇತ್ರತ್ವದ ರಾಜ್ಯ ಸರಕಾರ ರೂಪಿಸಿದ್ದ ಗೋಹತ್ಯೆ ನಿಷೇಧ ಕಾನೂನು ಹಾಗೂ ಮತಾಂತರ ತಡೆಯಲು ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ರೂಪಿಸಲು ಬಿಜೆಪಿ ಕೋರ್  ಕಮಿಟಿ ಸಲಹೆ ನೀಡಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಅವರು ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ  ಮಾತನಾಡುತ್ತಿದ್ದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಈ ಹಿಂದೆ ಬಿಜೆಪಿ ನೇತ್ರತ್ವದ ಸರಕಾರ ರಚನೆ ಮಾಡಿತ್ತು. ಆದರೆ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅದನ್ನು ರದ್ದು ಪಡಿಸಿತ್ತು. ಮುಂದಿನ ಹಂತದಲ್ಲಿ ಕೆಲವು ಬದಲಾವಣೆಯೊಂದಿಗೆ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಲು ಸರಕಾರದ ಹಂತದಲ್ಲಿ ಚಿಂತನೆ ನಡೆಯಲಿದೆ ಎಂದು ಲಿಂಬಾವಳಿ ತಿಳಿಸಿದ್ದಾರೆ.

ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ನಡೆಯುತ್ತಿದೆ ಇದನ್ನು ತಡೆಯಲು ರಾಜ್ಯದಲ್ಲಿ ಕಠಿಣ ಕಾನೂನಿನ ಅಗತ್ಯ ವಿದೆ ಎಂದು ಬಿಜೆಪಿ ಕೋರ್ ಕಮಿಟಿ ಸಲಹೆ ನೀಡಿದೆ.ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ, ರಾಜ್ಯ ಸಭಾ ಕ್ಷೇತ್ರದ ಚುನಾವಣೆ ಗಳ ತಯಾರಿ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆದಿದೆ.

ಆರ್ ಆರ್ ನಗರ ಮತ್ತು ಶಿರಾ ವಿಧಾನ ಸಭಾ ಕ್ಷೇತ್ರ ಗಳ ಉಪ ಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರ ಗಳಿಗೂ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಕೋರ್ ಕಮಿಟಿ ವಿಶ್ವಾಸ ವ್ಯಕ್ತ ಪಡಿಸಿರುವುದಾಗಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News