ಪ್ರಧಾನಿ ಮೋದಿ ನಿರ್ಧಾರದಿಂದ ಕೊರೋನ ನಿಯಂತ್ರಣ: ಸದಾನಂದ ಗೌಡ
ಮಂಗಳೂರು, ನ.5: ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಕೊರೋನ ನಿಯಂತ್ರಣಕ್ಕೆ ಬರುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಕಷ್ಟ ಸಮಯದಲ್ಲಿ ಒಬ್ಬ ನಾಯಕ ನಡೆದುಕೊಳ್ಳುವ ರೀತಿ ಆತನ ಸಾಮರ್ಥ್ಯವನ್ನು ತಿಳಿಸುತ್ತದೆ. ಕೊರೋನ ಬಳಿಕ ಎದುರಾದ ಸವಾಲುಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಯಶಸ್ವಿಯಾಗಿ ನಿಭಾಯಿಸಿವೆ. ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಅವರಿಬ್ಬರೂ ಉತ್ತಮ ಆಡಳಿತ ನೀಡಿಕೆಗೆ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ ಎಂದರು.
130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೊರೋನ ನಿಯಂತ್ರಣ ಸುಲಭವಲ್ಲ. ಆದರೆ, ಮೋದಿ ಸರಕಾರ ಸವಾಲು ಸ್ವೀಕರಿಸಿ ಯಶಸ್ವಿಯಾಗಿದೆ. ವಿಶ್ವಬ್ಯಾಂಕ್ ಅಂಕಿಅಂಶ ಪ್ರಕಾರ ಭಾರತದಲ್ಲಿ 10 ಲಕ್ಷ ಜನರ ಪೈಕಿ 5500 ಸಾವಿರ ಮಂದಿಗೆ ಕೊರೋನಾ ಬಾಧಿಸಿದೆ. ಆದರೆ, ಅಮೆರಿಕಾ, ಬ್ರೆಝಿಲ್‌ನಂತಹ ದೇಶದಲ್ಲಿ 10 ಲಕ್ಷ ಜನರ ಪೈಕಿ 25000 ಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಭಾರತದಲ್ಲಿ ಕೊರೋನ ಸಾವಿನ ದರ 10 ಲಕ್ಷ ಜನರಿಗೆ 83 ಆಗಿದೆ. ಬ್ರಿಟನ್, ಸ್ಪೈನ್, ಅಮೆರಿಕದಲ್ಲಿ ಈ ದರ 490ರಿಂದ 620ರಷ್ಟಿದೆ. ಈ ಅಂಕಿ ಅಂಶ ಭಾರತದಲ್ಲಿ ಕೊರೋನ ಹತೋಟಿಯಲ್ಲಿದೆ ಎಂಬುದರ ಸೂಚಕವಾಗಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಕೊರೋನ ನಿಯಂತ್ರಣಕ್ಕೆ ಮೋದಿ ಸರಕಾರದ ದಿಟ್ಟ ನಿರ್ಧಾರ ಕಾರಣ ಎಂದು ಡಿವಿಎಸ್ ಹೇಳಿದರು.
ದೇಶದಲ್ಲಿ ಇಂದು ಕೊರೋನ ಪೀಡಿತರಿಗೆ 90 ಲಕ್ಷ ಬೆಡ್‌ಗಳು, 12 ಸಾವಿರ ಕ್ವಾರಂಟೈನ್ ಸೆಂಟರ್‌ಗಳು, ಲ್ಯಾಬ್‌ಗಳು ಇಲ್ಲದಿದ್ದ ನಮ್ಮ ದೇಶದಲ್ಲಿ ಈಗ ಎರಡು ಸಾವಿರ ಲ್ಯಾಬ್‌ಗಳು ಸಿದ್ಧಗೊಂಡಿವೆ. 10 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆತ್ಮನಿರ್ಭರ್ ಭಾರತ ಪರಿಕಲ್ಪನೆಯಲ್ಲಿ ಪಿಪಿಇ ಕಿಟ್ ತಯಾರಿಕೆಯಲ್ಲಿ ಭಾರತ ಇಂದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಪ್ರತಿದಿನ 5 ಲಕ್ಷ ಪಿಪಿಇ ಕಿಟ್, 3 ಲಕ್ಷ ಎನ್95 ಮಾಸ್ಕ್ ತಯಾರಾಗುತ್ತಿದೆ. ವೆಂಟಿಲೇಟರ್‌ಗಳೂ ಸಿದ್ದಗೊಳ್ಳುತ್ತಿವೆ. ವಿಶ್ವಬ್ಯಾಂಕ್ ಪ್ರಕಾರ ಮುಂದಿನ ವರ್ಷ ದೇಶದ ಜಿಡಿಪಿ ದರ 8.5 ಆಗಲಿದೆ ಎಂದು ಸದಾನಂದ ಗೌಡ ಹೇಳಿದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ ವರ್ಷ 2019ರಲ್ಲಿ 7.19 ಇದ್ದರೆ, ಈ ವರ್ಷ ಇಳಿಕೆಗೊಂಡು 6.67 ಆಗಿದೆ. ರೈಲ್ವೆ ಬೋಗಿ ಉತ್ಪಾದನೆ ಹೆಚ್ಚಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ 80 ಕೋಟಿ ಜನರಿಗೆ ಅಕ್ಕಿ, ಗೋಧಿ ವಿತರಣೆ ಆಗುತ್ತಿದೆ. ಜನ್‌ಧನ್ ಯೋಜನೆಯಲ್ಲಿ ಮಹಿಳೆಯರ ಖಾತೆಗೆ 20.6 ಕೋಟಿ ರೂ. ನೀಡಲಾಗಿದೆ. ಮುದ್ರಾ ಯೋಜನೆ, ಪಿಎಂ ಕಿಸಾನ್ ಯೋಜನೆ, ನಿರ್ಮಾಣ ಕಾಮಗಾರಿ ಕಾರ್ಮಿಕ ರಿಗೆ ನೆರವು, ಕೋವಿಡ್ ಎದುರಿಸಲು ರಾಜ್ಯಗಳಿಗೆ ಹನ್ನೊಂದು ಸಾವಿರದ ಎರಡು ಕೋಟಿ ರೂ. ನೆರವು, ಜಿಎಸ್‌ಟಿ ನೆರವು ಕೊರೋನ ಸಂದರ್ಭದ ಸಂಕಷ್ಟ ದೂರ ಮಾಡಲು ಕೇಂದ್ರ ಸರಕಾರ ಕೈಗೊಂಡ ಕ್ರಮಗಳಾಗಿವೆ ಎಂದವರು ಹೇಳಿದರು.