×
Ad

ಬ್ರಹ್ಮಾವರ: ಊರಿಗೆ ಬಂದ ಬಿಎಸ್‌ಎಫ್ ಸೈನಿಕ ನಾಪತ್ತೆ

Update: 2020-11-05 18:52 IST

ಬ್ರಹ್ಮಾವರ, ನ.5: ರಜೆಯಲ್ಲಿ ಊರಿಗೆ ಬಂದಿದ್ದ ಗಡಿಭದ್ರತಾ ದಳ (ಬಿಎಸ್‌ಎಫ್)ದಲ್ಲಿ ಗಡಿ ರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಸೈನಿಕರೊಬ್ಬರು ಮಂಗಳವಾರ ಬೆಳಗ್ಗೆ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಮನೆಯಿಂದ ಹೊರ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂಡ್ಕಿನಜೆಡ್ಡು ಭೈರವ ನಿಲಯದ ವಸಂತ ಕೆ.ನಾಯ್ಕ್ (48) ಅವರು ಸದ್ಯ ಶ್ರೀನಗರದಲ್ಲಿ ಬಿಎಸ್‌ಎಫ್‌ನ ಗಡಿ ರಕ್ಷಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದು, ಎರಡು ವಾರಗಳ ಹಿಂದೆ ಅಂದರೆ ಅ.23ರಂದು ರಜೆಯಲ್ಲಿ ಊರಿಗೆ ಬಂದಿದ್ದರು ಎಂದು ಅವರ ಪತ್ನಿ ಅಮಿತಾ ವಿ.ನಾಯ್ಕಿ ದೂರಿನಲ್ಲಿ ತಿಳಿಸಿದ್ದಾರೆ.

ವಸಂತ ಅವರು ನ.3ರಂದು ಬೆಳಗ್ಗೆ 11:15ಕ್ಕೆ ಅವರ ಮೊಬೈಲ್ ಫೋನನ್ನು ಮನೆಯಲ್ಲಿ ಬಿಟ್ಟು ನಡೆದುಕೊಂಡು ಮುಂಡ್ಕಿನಜೆಡ್ಡು ಬಸ್ ‌ನಿಲ್ದಾಣದತ್ತ ತೆರಳಿದ್ದರು. ಅವರು ಅಪರಾಹ್ನ 1:30ರಿಂದ 2 ಗಂಟೆಯವರೆಗೆ ಹೆಬ್ರಿಯ ಪಿಡಿಓ ಅವರ ಕಚೇರಿಯಲ್ಲಿ ಇದ್ದು, ಈ ಬಗ್ಗೆ ಪಿಡಿಓ ಅವರು ವಸಂತರ ಮೊಬೈಲ್‌ಗೆ ಕರೆ ಮಾಡಿ ಅಮಿತಾರಿಗೆ ತಿಳಿಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಆದರೆ ಅನಂತರ ಅವರು ಮನೆಗೆ ಬಾರದೇ ಇದ್ದು, ಗಾಬರಿಗೊಂಡ ಅಮಿತಾ ಅವರು ವಸಂತರ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಬುಧವಾರ ಅಮಿತಾ ಅವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News