ಗಂಗೊಳ್ಳಿ : ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತಿದ್ದ ಬೋಟು ವಶಕ್ಕೆ

Update: 2020-11-05 14:58 GMT

ಗಂಗೊಳ್ಳಿ, ನ. 5: ಇಲ್ಲಿನ ಗಂಗೊಳ್ಳಿ ಸಮುದ್ರ ತೀರದಿಂದ 10 ನಾಟಿಕಲ್ ಮೈಲು ದೂರದಲ್ಲಿ ಕಾನೂನು ಬಾಹಿರವಾಗಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೂಲದ ಆಳ ಸಮುದ್ರ ಬೋಟೊಂದನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಗಂಗೊಳ್ಳಿಯ ಕರಾವಳಿ ಕಾವಲು ಪಡೆಯ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಬುಲ್‌ಟ್ರಾಲ್ ಮೀನುಗಾರಿಕೆಯಲ್ಲಿ ಜೋಡಿ ಬೋಟುಗಳು ಭಾಗವಹಿಸುತ್ತವೆ. ಆದರೆ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರ ಕಾರ್ಯಾಚರಣೆ ವೇಳೆ ಒಂದು ಬೋಟು ಪರಾರಿಯಾಗಿದ್ದು, ಒಂದು ಮಾತ್ರ ಸಿಕ್ಕಿ ಬಿದ್ದಿದೆ. ಸೆರೆಗೆ ಸಿಕ್ಕ ಬೋಟಿನಲ್ಲಿ ಆಂಧ್ರಪ್ರದೇಶ ಮೂಲದ 10 ಮಂದಿ ಮೀನುಗಾರರಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಲಾಗಿದೆ. ವಶಕ್ಕೆ ಪಡೆದ ಬೋಟಿನ ವರದಿಯನ್ನು ಮುಂದಿನ ಕ್ರಮಕ್ಕಾಗಿ ಮೀನುಗಾರಿಕೆ ಇಲಾಖೆಗೆ ಸಲ್ಲಿಸಲಾಗಿದೆ.

ಸದ್ಯ ಬೋಟು ಗಂಗೊಳ್ಳಿ ಬಂದರಿನಲ್ಲಿದ್ದು, ಕರಾವಳಿ ಕಾವಲು ಪಡೆಯ ಪೊಲೀಸರು ನೀಡಿದ ವರದಿಯನ್ನು ಮೇಲಾಧಿಕಾರಿಗಳಿಗೆ ನೀಡಿ ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಲತಾ ತಿಳಿಸಿದ್ದಾರೆ.

ಮೀನುಗಾರರ ಆಕ್ರೋಶ

ಮಂಗಳೂರು ಮೂಲದ ಬುಲ್‌ಟ್ರಾಲ್ ಬೋಟು ಗಂಗೊಳ್ಳಿಯಿಂದ 10 ನಾಟಿಕಲ್ ಮೈಲು ದೂರದಲ್ಲಿ ಕಾನೂನೂ ಬಾಹಿರ ಮೀನುಗಾರಿಕೆ ನಡೆಸುತ್ತಿದ್ದುದನ್ನು ಇಲ್ಲಿನ ನಾಡದೋಣಿ ಮೀನುಗಾರರು ಖಂಡಿಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಗಂಗೊಳ್ಳಿ ಕರಾವಳಿ ಠಾಣೆ ಎದುರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯ ಮೀನುಗಾರರು, ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತಿ ದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಸಂಘದ ಸದಸ್ಯರು, ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಉಪಾಧ್ಯಕ್ಷ ಸೂರಜ್ ಖಾರ್ವಿ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪ್ರಭಾರ ನಿರೀಕ್ಷಕ ಅನಂತಪದ್ಮನಾಭ, ಗಂಗೊಳ್ಳಿ ಠಾಣಾ ಎಸ್‌ಐ ಭೀಮಾ ಶಂಕರ್, ಎಎಸ್‌ಐ ಮೋಹನ್‌ರಾಜ್, ಭಾಸ್ಕರ, ಸಿಬಂದಿಯಾದ ರಾಘವೇಂದ್ರ, ಸುರೇಂದ, ಈಶ್ವರ, ಯುವರಾಜ, ಪ್ರಸಾದ್, ಮೀನುಗಾರಿಕೆ ಇಲಾಖೆಯ ವಿಶ್ವನಾಥ್, ಗೋಪಾಲಕೃಷ್ಣ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News