ಯಂತ್ರಶ್ರೀ ಯೋಧರ ತರಬೇತಿ ಕಾರ್ಯಾಗಾರ
ಉಡುಪಿ, ನ.5: ಉತ್ಪಾದನಾ ವೆಚ್ಚ ಅಧಿಕವಾಗುತ್ತಿರುವುದರಿಂದ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಕರ ಬದುಕಿಗೆ ಹೊಸ ದಿಕ್ಕು ತೋರಿಸುವ ಉದ್ದೇಶದಿಂದ ಹಲವು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಚ್.ಕೆಂಪೇಗೌಡ ಹೇಳಿದ್ದಾರೆ.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಉಡುಪಿ ತಾಲೂಕು ಹಾಗೂ ಕೃಷಿ ಇಲಾಖೆ ಆತ್ಮ ಯೋಜನೆ ಅನುಷ್ಠಾನ ಸಮಿತಿಯ ವತಿಯಿಂದ ಪುತ್ತೂರು ಮುಂಡ್ರಪಾಡಿಯ ರಂಗಯ್ಯ ನಾಯ್ಕರ ಮನೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯಂತ್ರಶೀ ಯೋಧರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈ ಬಾರಿ 1920 ಹೆಕ್ಟೇರ್ ಪ್ರದೇಶದಲ್ಲಿ ಯಾಂತ್ರೀಕೃತ ಕೃಷಿ ಮಾಡಲಾಗಿದೆ. ನೇಜಿ ತಯಾರಿ ಹಾಗೂ ನೇಜಿ ಕೃಷಿಯ ಬಗ್ಗೆ ತಿಳಿದು ಕೊಳ್ಳುವುದು ಅಗತ್ಯವಾಗಿದೆ. ಟ್ರೇಗಳನ್ನು ಬಳಸಿಕೊಂಡು ನೇಜಿ ನಾಟಿ ಮಾಡಿದರೆ ಉತ್ತಮ ಫಲಿತಾಂಶ ಸಿಗಲು ಸಾಧ್ಯವಿದೆ ಎಂದವರು ಹೇಳಿದರು.
ಯಾಂತ್ರೀಕೃತ ನಾಟಿಯಿಂದ ಕೂಲಿಯಾಳುಗಳಿಗೆ ನೀಡುವ ಹಣ ಉಳಿತಾಯ ವಾಗುತ್ತದೆ. ಅಲ್ಲದೆ ಶೇ.20ರಿಂದ 25ರಷ್ಟು ಹೆಚ್ಚು ಇಳುವರಿ ಪಡೆಯಲು ಸಹ ಇದರಿಂದ ಸಾಧ್ಯವಾಗುತ್ತದೆ ಎಂದವರು ನುಡಿದರು. ಇದೇ ಸಂದರ್ಭದಲ್ಲಿ ನೇಜಿ ಕೃಷಿ ಪ್ರಾತ್ಯಕ್ಷಿಕೆಯೂ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಹಿರಿಯ ನಿರ್ದೇಶಕ ಗಣೇಶ್ ಬಿ.ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ಶಿವಮೊಗ್ಗದ ಸಿಎಚ್‌ಎಸ್‌ಸಿ ಮಧ್ಯಮ ವಲಯ ನಿರ್ದೇಶಕ ದಿನೇಶ್ ಎ., ಪ್ರಗತಿಪರ ಕೃಷಿಕ ರಂಗಯ್ಯ ನಾಯ್ಕ, ಯೋಜನಾಧಿಕಾರಿಗಳಾದ ಸುಧೀರ್, ಅಶೋಕ್ ಉಪಸ್ಥಿತರಿದ್ದರು. ಯೋಜನಾಧಿಕಾರಿ ರಾಘವೇಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.