ಗ್ರಾಹಕರ ಖಾತೆಗಳಿಗೆ ಚಕ್ರಬಡ್ಡಿ ಮೊತ್ತ ಜಮಾ: ಹಣ ಹಿಂದೆಗೆಯಲು ಏಕೈಕ ಮಾರ್ಗವಿಲ್ಲಿದೆ

Update: 2020-11-05 15:55 GMT

ಮುಂಬೈ,ನ.5: ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್‌ಬಿಐ ಘೋಷಿಸಿದ್ದ ಸಾಲ ಮರುಪಾವತಿ ಸ್ತಂಭನ ಅವಧಿಗೆ ಎರಡು ಕೋ.ರೂ.ವರೆಗಿನ ಎಲ್ಲ ಸಾಲಗಳ ಮೇಲೆ ವಿಧಿಸಿದ್ದ ಚಕ್ರಬಡ್ಡಿಯನ್ನು ಗ್ರಾಹಕರ ಖಾತೆಗಳಿಗೆ ಜಮಾ ಮಾಡುತ್ತಿವೆ.

ಗ್ರಾಹಕರು ಮರುಪಾವತಿ ಸ್ತಂಭನ ಸೌಲಭ್ಯ ಪಡೆದಿರಲಿ, ಪಡೆಯದಿರಲಿ,ಸ್ತಂಭನಾವಧಿಯಲ್ಲಿ ವಿಧಿಸಲಾಗಿದ್ದ ಎರಡು ಕೋ.ರೂ.ವರೆಗಿನ ಎಲ್ಲ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ನ.5ರೊಳಗೆ ಗ್ರಾಹಕರ ಖಾತೆಗಳಿಗೆ ಮರುಜಮಾ ಮಾಡುವಂತೆ ಸರಕಾರವು ವಾಣಿಜ್ಯ ಬ್ಯಾಂಕುಗಳು,ಬ್ಯಾಂಕೇತರ ಹಣಕಾಸು ಸಂಸ್ಥೆಗಳು,ಸಹಕಾರಿ ಬ್ಯಾಂಕುಗಳು ಸೇರಿದಂತೆ ಎಲ್ಲ ಹಣಕಾಸು ಸಂಸ್ಥೆಗಳಿಗೆ ಆದೇಶಿಸಿತ್ತು. ಚಕ್ರಬಡ್ಡಿ ಮರುಜಮಾ ಸೌಲಭ್ಯವು ಎನ್‌ಪಿಎ ಆಗಿರುವ ಸಾಲಗಳಿಗೆ ಅನ್ವಯಿಸುವುದಿಲ್ಲ.

ಹಣಕಾಸು ಸಂಸ್ಥೆಗಳು ಈ ಚಕ್ರಬಡ್ಡಿ ಹಣವನ್ನು ಗ್ರಾಹಕರ ಸಾಲಖಾತೆಗಳಿಗೆ ಮರುಜಮಾ ಮಾಡುತ್ತವೆ,ಉಳಿತಾಯ ಖಾತೆಗಳಿಗೆ ಅಲ್ಲ.

ಗ್ರಾಹಕರು ಮರುಪಾವತಿ ಸ್ತಂಭನ ಸೌಲಭ್ಯವನ್ನು ಪಡೆದುಕೊಂಡಿದ್ದರೆ ಮಾ.1ರಿಂದ ಆ.31ರವರೆಗಿನ ಅವಧಿಗೆ ಬ್ಯಾಂಕುಗಳು ಚಕ್ರಬಡ್ಡಿಯನ್ನು ವಿಧಿಸುವುದಿಲ್ಲ. ಬುಕ್ ಎಂಟ್ರಿಯ ಮೂಲಕ ಸಾಲದ ಖಾತೆಗಳಲ್ಲಿ ಬಡ್ಡಿಯ ಮೇಲೆ ವಿಧಿಸಲಾಗಿದ್ದ ಬಡ್ಡಿಯನ್ನು ತೆಗೆದುಹಾಕಲಾಗುತ್ತದೆ.

ಗ್ರಾಹಕರು ಮರುಪಾವತಿ ಸ್ತಂಭನ ಸೌಲಭ್ಯವನ್ನು ಪಡೆದುಕೊಂಡಿರದಿದ್ದರೆ ಚಕ್ರಬಡ್ಡಿ ಮೊತ್ತವನ್ನು ಅವರ ಅಸಲು ಬಾಕಿಗೆ ಹೊಂದಿಸಲಾಗುವುದು ಮತ್ತು ಅಷ್ಟು ಪ್ರಮಾಣದಲ್ಲಿ ಅಸಲು ಬಾಕಿ ಕಡಿಮೆಯಾಗುತ್ತದೆ ಎಂದು ಎಸ್‌ಬಿಐನ ಆಡಳಿತ ನಿರ್ದೇಶಕ ಸಿ.ಎಸ್.ಶೆಟ್ಟಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

 ಮರುಪಾವತಿ ಸ್ತಂಭನ ಅವಧಿಯಲ್ಲಿ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿರುವ ಗ್ರಾಹಕರಿಗೂ ಚಕ್ರಬಡ್ಡಿ ಮನ್ನಾ ಸೌಲಭ್ಯ ದೊರೆಯಲಿದೆ. ಸಾಲ ಬಾಕಿಯು ಶೂನ್ಯವಾಗುವುದರಿಂದ ಗ್ರಾಹಕರು ಈ ಹಣವನ್ನು ಹಿಂದೆಗೆದುಕೊಳ್ಳಬಹುದಾಗಿದೆ. ಅವರು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ ಚಕ್ರಬಡ್ಡಿ ಹಣವನ್ನು ಅದಕ್ಕೆ ಜಮಾ ಮಾಡಲಾಗುವುದು. ಉಳಿತಾಯ ಖಾತೆಯಿಲ್ಲದ ಗ್ರಾಹಕರು ಹಣವನ್ನು ಹಿಂಪಡೆಯಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಬ್ಯಾಂಕು ಅವರಿಗೆ ಚೆಕ್ ಅಥವಾ ಡ್ರಾಫ್ಟ್‌ನ್ನು ನೀಡುತ್ತದೆ ಎಂದು ಶೆಟ್ಟಿ ತಿಳಿಸಿದರು.

ಗೃಹಸಾಲ,ಶಿಕ್ಷಣ ಸಾಲ,ಗ್ರಾಹಕ ಬಳಕೆ,ವೈಯಕ್ತಿಕ ಸಾಲ, ಎಂಎಸ್‌ಎಂಇ ಸಾಲಗಳು,ವೃತ್ತಿಪರ ಸಾಲ,ಕ್ರೆಡಿಟ್ ಕಾರ್ಡ್ ಸಾಲ ಮತ್ತು ಚಿನ್ನ ಅಡಮಾನ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಅನ್ವಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News