ಅಸ್ಸಾಂ-ಮಿಝೋರಾಂ ವಿವಾದ: ಅಸ್ಸಾಂಗೆ ಹೆಚ್ಚುವರಿ ಭದ್ರತಾ ಪಡೆ ರವಾನಿಸಲು ಕೇಂದ್ರದ ಒಪ್ಪಿಗೆ

Update: 2020-11-05 16:55 GMT
ಫೋಟೊ ಕೃಪೆ: scroll.in

ಗುವಾಹಟಿ, ನ.5: ಮಿಝೋರಾಂನ ಪೊಲೀಸ್ ಕಸ್ಟಡಿಯಲ್ಲಿ ಅಸ್ಸಾಂ ಪ್ರಜೆಯೊಬ್ಬ ಸಾವನ್ನಪ್ಪಿದ ಘಟನೆ ಸೋಮವಾರ ಸಂಭವಿಸಿದ್ದು ಇದರಿಂದ ಉಭಯ ರಾಜ್ಯಗಳ ಗಡಿಭಾಗದಲ್ಲಿ ಉದ್ವಿಗ್ನತೆ ನೆಲೆಸಿದೆ. ಈ ಮಧ್ಯೆ, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಅಸ್ಸಾಂಗೆ ಹೆಚ್ಚುವರಿ ಕೇಂದ್ರ ಪಡೆಗಳನ್ನು ರವಾನಿಸಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ ಎಂದು ಅಸ್ಸಾಂ ಮುಖ್ಯ ಕಾರ್ಯದರ್ಶಿ ಜಿಷ್ಣು ಬರುವಾ ಹೇಳಿದ್ದಾರೆ.

ಅಸ್ಸಾಂ ಪ್ರಜೆ ಇಂತಝುಲ್ ಲಸ್ಕರ್‌ನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಅಸ್ಸಾಂ ಅಧಿಕಾರಿಗಳು ಹೇಳಿದ್ದರು. ಆದರೆ ಲಸ್ಕರ್ ಡ್ರಗ್ಸ್ ಪೂರೈಕೆದಾರನಾಗಿದ್ದು ಗಡಿ ಭಾಗದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದಾಗ ಯಂಗ್ ಮಿರೆ ಅಸೋಸಿಯೇಷನ್‌ನ ಕಾರ್ಯಕರ್ತರು ಬಂಧಿಸಿದ್ದರು ಎಂದು ಮಿಝೋರಾಂ ಪೊಲೀಸರು ಹೇಳಿಕೆ ನೀಡಿದ್ದರು. ಈ ಮಧ್ಯೆ, ಲಸ್ಕರ್ ಮಿಝೋರಾಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದು ಇದರಿಂದ ಆತನ ಹುಟ್ಟೂರು ಸಹಿತ ಗಡಿಭಾಗದಲ್ಲಿ ಉದ್ವಿಗ್ನತೆ ನೆಲೆಸಿದೆ.

ಬುಧವಾರ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಅಸ್ಸಾಂ ಮುಖ್ಯ ಕಾರ್ಯದರ್ಶಿ ಜಿಷ್ಣು ಬರುವಾ ಸಂಯಮ ವಹಿಸುವಂತೆ ಮತ್ತು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ದುಷ್ಕರ್ಮಿಗಳ ಕೃತ್ಯದಿಂದ ಅಮಾಯಕ ವ್ಯಕ್ತಿಯೊಬ್ಬರ ಮರಣ ಸಂಭವಿಸಿದ್ದು ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದೇವೆ. ಗಡಿಭಾಗದಲ್ಲಿರುವ ಉದ್ವಿಗ್ನತೆ ಕಡಿಮೆಗೊಳಿಸಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸುವ ಕೋರಿಕೆಗೆ ಕೇಂದ್ರ ಸರಕಾರ ಸಮ್ಮತಿಸಿದೆ ಎಂದ ಅವರು, ಲಸ್ಕರ್ ಸಾವಿನ ಪ್ರಕರಣದ ತನಿಖೆ ನಡೆಸಲಾಗುವುದು. ಮೃತನ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. 1972ರಲ್ಲಿ ಅಸ್ಸಾಂನಿಂದ ಮಿಝೋರಾಂ ಅನ್ನು ಪ್ರತ್ಯೇಕಿಸಿ ಹೊಸ ರಾಜ್ಯವನ್ನಾಗಿ ರೂಪಿಸಲಾಗಿದೆ. ದಕ್ಷಿಣ ಅಸ್ಸಾಂನ ಕಚರ್, ಹಲಿಯಾಕಂಡಿ ಮತ್ತು ಕರೀಮ್‌ಗಂಜ್ ಜಿಲ್ಲೆಗಳು ಮಿರೆರಾಂನೊಂದಿಗೆ 164.6 ಕಿ.ಮೀ ಉದ್ದದ ಗಡಿಯನ್ನು ಹಂಚಿಕೊಂಡಿವೆ. ಈ ಪ್ರದೇಶದ ಹಲವೆಡೆ ಗಡಿರೇಖೆಯ ಕುರಿತು ಉಭಯ ರಾಜ್ಯಗಳ ಮಧ್ಯೆ ಭಿನ್ನಾಭಿಪ್ರಾಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News