ನ್ಯೂಯಾರ್ಕ್, ಡೆಟ್ರಾಯಿಟ್, ಫೀನಿಕ್ಸ್ ನಗರಗಳಲ್ಲಿ ಪ್ರತಿಭಟನೆ

Update: 2020-11-05 17:49 GMT

ವಾಶಿಂಗ್ಟನ್, ನ. 5: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾವಣೆಯಾಗಿರುವ ಎಲ್ಲ ಮತಗಳ ಎಣಿಕೆಯಾಗಬೇಕು ಎಂದು ಆಗ್ರಹಿಸಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್‌ರ ಸಾವಿರಾರು ಬೆಂಬಲಿಗರು ನ್ಯೂಯಾರ್ಕ್‌ನಲ್ಲಿ ಬುಧವಾರ ಸಂಜೆ ಧರಣಿ ನಡೆಸಿದರು.

ಪ್ರದರ್ಶನಕಾರರು ಶಾಂತವಾಗಿ ಮ್ಯಾನ್‌ಹಟನ್‌ನ ಗ್ರೀನ್‌ವಿಚ್ ವಿಲೇಜ್‌ನಲ್ಲಿ ಫಿಫ್ತ್ ಅವೆನ್ಯೂನಿಂದ ವಾಶಿಂಗ್ಟನ್ ಸ್ಕ್ವೇರ್ ಪಾರ್ಕ್‌ವರೆಗೆ ಮೆರವಣಿಗೆ ನಡೆಸಿದರು.

ಅದೇ ವೇಳೆ, ಫಲಿತಾಂಶವನ್ನು ನಿರ್ಧರಿಸುವ ಎರಡು ಪ್ರಮುಖ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿಜಯಿಯಾಗುತ್ತಾರೆ ಎಂಬುದಾಗಿ ಮತದಾನೋತ್ತರ ಸಮೀಕ್ಷೆಯೊಂದು ಘೋಷಿಸಿದ ಬಳಿಕ, ಡೆಟ್ರಾಯಿಟ್ ಮತ್ತು ಫೀನಿಕ್ಸ್‌ಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ಪ್ರತಿಭಟನೆಗಳನ್ನು ನಡೆಸಿದರು.

ಡೊನಾಲ್ಡ್ ಟ್ರಂಪ್‌ರ ಅಭಿಮಾನಿಗಳು ಡೆಟ್ರಾಯಿಟ್ ಮತ್ತು ಫೀನಿಕ್ಸ್ ನಗರಗಳಲ್ಲಿನ ಮತ ಎಣಿಕೆ ಕೇಂದ್ರಗಳ ಎದುರು ಜಮಾಯಿಸಿದರು. ಟ್ರಂಪ್ ಪರವಾಗಿರುವ ಮತಗಳನ್ನು ಉದ್ದೇಶಪೂರ್ವಕವಾಗಿ ಎಣಿಸಲಾಗುತ್ತಿಲ್ಲ ಎಂಬುದಾಗಿ ಅವರು ಆರೋಪಿಸಿದರು.

‘ಕಳ್ಳತನವನ್ನು ನಿಲ್ಲಿಸಿ’ ಮತ್ತು ‘ನನ್ನ ಮತ್ವನ್ನು ಎಣಿಸಿ’ ಎಂಬ ಘೋಷಣೆಗಳನ್ನು ಟ್ರಂಪ್ ಬೆಂಬಲಿಗರು ಕೂಗಿದರು. ಮುಖಗವಸುಗಳನ್ನು ಧರಿಸದ ಅವರು ಬಂದೂಕುಗಳು ಮತ್ತು ಹ್ಯಾಂಡ್‌ಗನ್‌ಗಳನ್ನು ಹಿಡಿದುಕೊಂಡಿದ್ದರು.

ಮಿಶಿಗನ್ ರಾಜ್ಯವನ್ನು ಬೈಡನ್ ಗೆದ್ದಿದ್ದಾರೆ ಎಂಬುದಾಗಿ ಎಪಿ ಸುದ್ದಿ ಸಂಸ್ಥೆ ಘೋಷಿಸುವ ಸ್ವಲ್ಪವೇ ಮೊದಲು ಟ್ರಂಪ್ ಬೆಂಬಲಿಗರು ಡೆಟ್ರಾಯಿಟ್ ನಗರದ ಟಿಸಿಎಫ್ ಸೆಂಟರ್‌ನ ಹೊರಗಡೆ ಪ್ರತಿಭಟನೆ ನಡೆಸಿದರು.

ಈ ನಡುವೆ, ಪೋರ್ಟ್‌ಲ್ಯಾಂಡ್ ನಗರದಲ್ಲಿ ಟ್ರಂಪ್ ವಿರೋಧಿ ಗುಂಪುಗಳು ಅಂಗಡಿಗಳ ಕಿಟಿಕಿ ಗಾಜುಗಳನ್ನು ಒಡೆದಿವೆ. ನೂರಾರು ಪ್ರತಿಭಟನಕಾರರನ್ನು ಪೊಲೀಸರು ತಡೆಹಿಡಿದರು. ಬಳಿಕ ಗವರ್ನರ್ ಉದ್ರಿಕ್ತ ಸ್ಥಳಗಳಲ್ಲಿ ನ್ಯಾಶನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಿದರು.

ಮಂಗಳವಾರ ನಡೆದ ಚುನಾವಣೆಯ ಫಲಿತಾಂಶವನ್ನು ‘ನಾವು ರಕ್ಷಿಸುತ್ತೇವೆ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಕಾರರು ಪೋರ್ಟ್‌ಲ್ಯಾಂಡ್ ನದಿಯ ಬದಿಯೂ ಜಮಾಯಿಸಿದರು. ‘ಪ್ರತಿ ಮತವನ್ನು ಎಣಿಕೆ ಮಾಡಿ’ ಹಾಗೂ ‘‘ಮತದಾನ ಮುಗಿದಿದೆ, ಹೋರಾಟ ಮುಂದುವರಿಯುತ್ತದೆ’ ಎಂಬ ಘೋಷಣೆಗಳನ್ನು ಅವರು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News