ಬಾಕಿಯಾಗಿರುವ ಎಲ್ಲ ಅಂಚೆ ಮತಪತ್ರಗಳ ಬಟವಾಡೆ: ಅಂಚೆ ಇಲಾಖೆಗೆ ನ್ಯಾಯಾಧೀಶ ಸೂಚನೆ

Update: 2020-11-05 17:53 GMT

ವಾಶಿಂಗ್ಟನ್, ನ. 5: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂಚೆ ಮೂಲಕ ಚಲಾವಣೆಯಾಗಿರುವ ಎಲ್ಲ ಮತಗಳು ಬಟವಾಡೆಯಾಗಬೇಕು ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಎಮೆಟ್ ಸಲಿವಾನ್ ಬುಧವಾರ ಹೇಳಿದ್ದಾರೆ. ಬಟವಾಡೆಯಾಗದ ಮತಗಳಿಗೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸಲು ಅಂಚೆ ಇಲಾಖೆ ಯಾಕೆ ವಿಫಲವಾಗಿದೆ ಎನ್ನುವುದಕ್ಕೆ ಪೋಸ್ಟ್‌ಮಾಸ್ಟರ್ ಜನರಲ್ ಲೂಯಿಸ್ ಡೆಜಾಯ್ ಉತ್ತರಿಸಬೇಕು ಎಂದು ಅವರು ಸೂಚಿಸಿದರು.

 ‘‘ಮತಪತ್ರಗಳು ಎಲ್ಲಿವೆ ಹಾಗೂ ಅವುಗಳ ಎಣಿಕೆಯಾಗುವುದಕ್ಕಾಗಿ ಅವುಗಳನ್ನು ಹೇಗೆ ಬಟವಾಡೆ ಮಾಡಲಾಗುತ್ತದೆ ಎನ್ನುವುದು ಜ್ವಲಂತ ವಿಷಯವಾಗಿದೆ’’ ಎಂದು ನ್ಯಾಯಾಧೀಶರು ಹೇಳಿದರು.

ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಅಂಚೆ ಇಲಾಖೆಯ ಅಧಿಕಾರಿ ಕೆವಿನ್ ಬ್ರೇ, ಮತ ಪತ್ರಗಳ ಬಟವಾಡೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಹೆಚ್ಚಿನ ರಾಜ್ಯಗಳು ಮತದಾನ ನಡೆದ ಬಳಿಕ ಒಂದು ವಾರದವರೆಗೆ ಅಂಚೆ ಮತಪತ್ರಗಳನ್ನು ಸ್ವೀಕರಿಸುತ್ತವೆ. ಆದರೆ, ಈ ಅವಧಿಯಲ್ಲಿ ಅವುಗಳು ಅಂಚೆ ಮೊಹರನ್ನು ಹೊಂದಿರಬೇಕು.

ಮಹತ್ವದ ರಾಜ್ಯಗಳಲ್ಲಿ ಚುನಾವಣಾಧಿಕಾರಿಗಳು ಈಗಲೂ ಅಂಚೆ ಮತಗಳನ್ನು ಎಣಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News