ರಫೆಲ್ ನಡಾಲ್‌ಗೆ 1,000ನೇ ಗೆಲುವು

Update: 2020-11-05 18:57 GMT

ಪ್ಯಾರಿಸ್, ನ.5:ಸ್ಪೇನ್‌ನ ಟೆನಿಸ್ ಆಟಗಾರ ರಫೆಲ್ ನಡಾಲ್ ಪ್ಯಾರಿಸ್ ಮಾಸ್ಟರ್ಸ್ ಎರಡನೇ ಸುತ್ತಿನಲ್ಲಿ ಫೆಲಿಸಿಯಾನೊ ಲೋಪೆಝ್ ವಿರುದ್ಧ ಗೆಲುವಿ ನೊಂದಿಗೆ ಬುಧವಾರ ತಮ್ಮ ವೃತ್ತಿಜೀವನದಲ್ಲಿ 1,000ನೇ ವಿಜಯವನ್ನು ದಾಖಲಿಸಿದ್ದಾರೆ.

  20 ಬಾರಿ ಗ್ರಾನ್ ಸ್ಲಾಮ್ ಚಾಂಪಿಯನ್ ಆಗಿರುವ ನಡಾಲ್ 13ನೇ ಬಾರಿ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಯನ್ನು ಗೆದ್ದ ಒಂದು ತಿಂಗಳೊಳಗೆ ಫ್ರೆಂಚ್ ರಾಜಧಾನಿಯಲ್ಲಿ ನಡೆದ ಟೂರ್ನಿಯಲ್ಲಿ ಆಡುತ್ತಿದ್ದಾರೆ.ರಾಫೆಲ್ ನಡಾಲ್ ತನ್ನ ದೇಶದ ಲೋಪೆಜ್‌ರನ್ನು 4-6, 7-6 (7/5), 6-4ರಿಂದ ಹೊರ ಹಾಕಿದರು.

 ‘‘ದೊಡ್ಡ ಸಾಧನೆಯ ಬಗ್ಗೆ ಸಂತಸವಾಗಿದೆ. ನಾನು ಬಹಳಷ್ಟು ವಿಷಯಗಳ ಬಗ್ಗೆ ಹೆಮ್ಮೆಪಡುತ್ತೇನೆ. ಆದರೆ ಗಾಯದ ಕಾರಣದಿಂದಾಗಿ ನನ್ನ ವೃತ್ತಿಜೀವನದಲ್ಲಿ ಕೆಲವು ಸವಾಲುಗಳನ್ನು ಎದುರಿಸಿದ್ದೇನೆ’’ ಎಂದು ನಡಾಲ್ ಹೇಳಿದ್ದಾರೆ. ಎಪ್ರಿಲ್ 2002ರಲ್ಲಿ ಎಟಿಪಿ ಟೂರ್‌ನಲ್ಲಿ ಮೊದಲ ಗೆಲುವು ದಾಖಲಿಸಿದ್ದರು. ಆಗ ಅವರಿಗೆ ಕೇವಲ 15 ವರ್ಷವಾಗಿತ್ತು. ಇದೀಗ 1,201ನೇ ಪಂದ್ಯದಲ್ಲಿ 1,000ನೇ ಗೆಲುವು ದಾಖಲಿಸಿರುವ ನಡಾಲ್ ಗರಿಷ್ಠ ಗೆಲುವು ದಾಖಲಿಸಿದ ಸಾರ್ವಕಾಲಿಕ ಟೆನಿಸ್ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಜಿಮ್ಮಿ ಕಾನರ್ಸ್ (1,274) ವಿಜಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ, ಎರಡನೇ ಸ್ಥಾನದಲ್ಲಿರುವ ಆಟಗಾರ ರೋಜರ್ ಫೆಡರರ್ 1,513 ಪಂದ್ಯಗಳಲ್ಲಿ 1,242 ಗೆಲುವು ದಾಖಲಿಸಿದ್ದರು. ಇವಾನ್ ಲೆಂಡ್ಲ್ ಸಹ 1,000-ಗೆಲುವಿನ ತಡೆಗೋಡೆ ದಾಟಿದ್ದರು. ಅವರು 1,310 ಪಂದ್ಯಗಳಲ್ಲಿ 1,068 ಜಯ ಗಳಿಸಿದ್ದರು. ಮೊದಲ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿಗಾಗಿ ಪ್ರಯತ್ನದಲ್ಲಿರುವ 34ರ ಹರೆಯದ ನಡಾಲ್ ಮೂರನೇ ಸುತ್ತಿನಲ್ಲಿ ಜೋರ್ಡಾನ್ ಥಾಂಪ್ಸನ್ ಅವರನ್ನು ಎದುರಿಸಲಿದ್ದಾರೆ. ಜೋರ್ಡಾನ್ ಕ್ರೊಯೇಷಿಯಾದ ಬೊರ್ನಾ ಕೋರಿಕ್ ಅವರನ್ನು 2-6, 6-4, 6-2 ಸೆಟ್‌ಗಳಿಂದ ಸೋಲಿಸಿದರು. 39ರ ಹರೆಯದ ನಡಾಲ್ ಈ ವಾರ ಪ್ಯಾರಿಸ್‌ನಲ್ಲಿ ಟ್ರೋಫಿ ಜಯಿಸಿದರೆ ನೊವಾಕ್ ಜೊಕೊವಿಕ್ ಅವರ 36 ಮಾಸ್ಟರ್ಸ್ ಪ್ರಶಸ್ತಿಗಳನ್ನು ಜಯಿಸಿದ ದಾಖಲೆಯನ್ನು ಸರಿಗಟ್ಟಿ ದಂತಾಗುತ್ತದೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News