×
Ad

ಐಪಿಎಲ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಜಸ್‌ಪ್ರೀತ್ ಬುಮ್ರಾ

Update: 2020-11-06 12:07 IST

 ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದಿರುವ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ನೂತನ ದಾಖಲೆ ನಿರ್ಮಿಸಿದ ಭಾರತೀಯ ಬೌಲರ್ ಎನಿಸಿಕೊಂಡರು.

 ತನ್ನ 4 ಓವರ್‌ಗಳ ಬೌಲಿಂಗ್‌ನಲ್ಲಿ ಬುಮ್ರಾ ಕೇವಲ 14 ರನ್ ನೀಡಿ 4 ವಿಕೆಟ್‌ಗಳನ್ನು ಉರುಳಿಸಿದರು. ಈ ಮೂಲಕ ಈ ವರ್ಷದ ಐಪಿಎಲ್‌ನಲ್ಲಿ ಆಡಿರುವ 15 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್‌ಗಳನ್ನು ಉರುಳಿಸಿದರು. ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಶ್ರೇಯಕ್ಕೆ ಬುಮ್ರಾ ಪಾತ್ರರಾದರು. 2018ರ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವೇಗದ ಬೌಲರ್ ಭುವನೇಶ್ವರ ಕುಮಾರ್ ಒಟ್ಟು 26 ವಿಕೆಟ್‌ಗಳನ್ನು ಕಬಳಿಸಿದ್ದರು.

ಬುಮ್ರಾ ಈ ವರ್ಷದ ಐಪಿಎಲ್‌ನಲ್ಲಿ ಎರಡು ಬಾರಿ ನಾಲ್ಕು ವಿಕೆಟ್ ಗೊಂಚಲು ಪಡೆದಿರುವ ಏಕೈಕ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಕಳೆದ ತಿಂಗಳು ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಬುಮ್ರಾ 20 ರನ್‌ಗೆ 4 ವಿಕೆಟ್‌ಗಳನ್ನು ಕಬಳಿಸಿದ್ದರು.

ಬುಮ್ರಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ(4-14) ನೀಡಿ ಮುಂಬೈ ಇಂಡಿಯನ್ಸ್(200-5)ಡೆಲ್ಲಿ ತಂಡವನ್ನು 57 ರನ್ ಗಳಿಂದ ಮಣಿಸಿ ಆರನೇ ಬಾರಿ ಐಪಿಎಲ್ ಫೈನಲ್ ತಲುಪಲು ನೆರವಾಗಿದ್ದರು.

ಮುಂಬೈ ಗೆಲುವಿಗೆ ಕಾರಣವಾಗಿರುವ ಬುಮ್ರಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಐಪಿಎಲ್ ಪ್ಲೇ-ಆಫ್ ಪಂದ್ಯದಲ್ಲಿ ಬುಮ್ರಾ ಅವರು ಮುಂಬೈ ಪರ ಅತ್ಯುತ್ತಮ ಪ್ರದರ್ಶನ ನೀಡಿದರು. ಬುಮ್ರಾ ಓವರ್‌ವೊಂದರಲ್ಲಿ ಒಂದು ಮೇಡನ್ ಸಹಿತ ಎರಡು ವಿಕೆಟ್ ಉರುಳಿಸಿದ್ದರು. ಬುಮ್ರಾ ಬೌಲಿಂಗ್‌ಗೆ ತತ್ತರಿಸಿದ್ದ ಡೆಲ್ಲಿ 16ನೇ ಓವರ್‌ನಲ್ಲಿ ಮರು ಹೋರಾಡುವ ಅದರ ವಿಶ್ವಾಸ ಕಮರಿಹೋಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News