ಲಾಲೂಪ್ರಸಾದ್ ಜಾಮೀನು ಅರ್ಜಿ ವಿಚಾರಣೆ ಮಂದೂಡಿಕೆ
ಪಾಟ್ನಾ:ಬಹುಕೋಟಿ ರೂ.ಮೇವು ಹಗರಣಕ್ಕೆ ಸಂಬಂಧಿಸಿ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಜಾರ್ಖಂಡ್ ಹೈಕೋರ್ಟ್ ನವೆಂಬರ್ 27ರ ತನಕ ಮುಂದೂಡಿದೆ.
ಜಸ್ಟಿಸ್ ಅಪರೇಶ್ ಕುಮಾರ್ ಸಿಂಗ್ ಅವರ ಮುಂದೆ ಅರ್ಜಿಯು ವಿಚಾರಣೆಗೆ ಬಂದಿತ್ತು.ಸಿಬಿಐ ತನ್ನ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸದ ಕಾರಣ ಜಾಮೀನು ಅರ್ಜಿ ವಿಚಾರಣೆ ಮಂದೂಡಿಕೆಯಾಗಿದೆ
ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಲಾಲೂಪ್ರಸಾದ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದರು. ವಕೀಲರು ಆದಷ್ಟು ಬೇಗನೆ ಅರ್ಜಿ ವಿಚಾರಣೆ ನಡೆಸುವಂತೆಯೂ ಕೋರಿದ್ದರು.
ನನ್ನ ತಂದೆ ನವೆಂಬರ್ 10ರೊಳಗೆ ಬಿಡುಗಡೆಯಾಗಲಿದ್ದಾರೆ ಎಂದು ತೇಜಸ್ವಿ ಯಾದವ್ ಇತ್ತೀಚೆಗೆ ವಿಶ್ವಾಸ ವ್ಯಕ್ತಪಡಿಸಿದ್ದರು
ಮೇವು ಹಗರಣಕ್ಕೆ ಸಂಬಂಧಿಸಿ ಲಾಲೂ ಪ್ರಸಾದ್ ಅವರ ಕೊನೆಯ ಪ್ರಕರಣ ಇದಾಗಿತ್ತು. ಅವರು ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದರು.
"ಸಿಬಿಐ ಜಾಮೀನು ಅರ್ಜಿಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ'' ಎಂದು ಲಾಲೂ ಪರ ವಕೀಲ ಕಪಿಲ್ ಸಿಬಾಲ್ ಹೈಕೋರ್ಟ್‌ನಲ್ಲಿ ಹೇಳಿದ್ದಾರೆ.