×
Ad

ವಿದ್ಯುತ್ ದರ ಏರಿಕೆ : ಸಿಪಿಎಂ ಖಂಡನೆ

Update: 2020-11-06 16:28 IST

ಮಂಗಳೂರು, ನ.6: ರಾಜ್ಯ ಸರಕಾರವು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ಕ್ಕೆ ವಿದ್ಯುತ್ ದರಗಳನ್ನು ಪ್ರತಿ ಯೂನಿಟ್‌ಗೆ ರೂ.1.26 ರಂತೆ ಏರಿಕೆ ಮಾಡಲು ಕೋರಿದ್ದ ಕಾರಣ ಪ್ರಸ್ತುತ ವಿದ್ಯುತ್ ದರಗಳನ್ನು ಪ್ರತಿ ಯೂನಿಟ್‌ಗೆ ಸರಾಸರಿ 40 ಪೈಸೆ ಏರಿಕೆ ಮಾಡಲು ಅನುಮತಿಸಿದ್ದು ಇದು ಜನರ ಮೇಲಿನ ಹೊರೆ ಎಂದು ಸಿಪಿಎಂ ಖಂಡಿಸಿದೆ.

ರಾಜ್ಯ ಸರಕಾರವು 2020 ಎಪ್ರಿಲ್‌ನಿಂದಲೇ ಹೆಚ್ಚಿಸಬೇಕೆಂದಿದ್ದ ವಿದ್ಯುತ್ ದರಗಳನ್ನು ಕೋವಿಡ್ ಕಾರಣದಿಂದಾಗಿ ನವಂಬರ್ 1 ರಿಂದ ಏರಿಕೆ ಮಾಡಲು ಕೆಇಆರ್‌ಸಿ ಅನುಮತಿಸಿದೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಪುನರ್ಶ್ಚೇತನ ಪೂರ್ಣ ಪ್ರಮಾಣದಲ್ಲಿ ಆಗದೆ ಇರುವಾಗ ಜನತೆಯ ಉದ್ಯೋಗ ಮತ್ತು ಗಳಿಕೆಯು ತೀವ್ರ ಸಂಕಷ್ಟದಲ್ಲಿರುವಾಗ ಇಂತಹ ವಿದ್ಯುತ್ ದರ ಏರಿಕೆಯು ಜನತೆಯ ಕಷ್ಟವನ್ನು ಅರಿಯದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯ ಭಾಗವಾಗಿದೆ.

ರಾಜ್ಯ ಬಿಜೆಪಿ ಸರ್ಕಾರವು ವಿದ್ಯುತ್ ದರ ಏರಿಕೆಗೆ ಮುಂದಾದರೆ ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್-ಡೀಸೆಲ್ ದರ ಏರಿಕೆಗಳಿಗೆ ಕಾರಣ ವಾಗಿದೆ. ಒಟ್ಟಾರೆ ಬಿಜೆಪಿ ಸರ್ಕಾರಗಳು ಜನತೆಗೆ ಸಂಕಷ್ಟದಲ್ಲಿ ನೆರವಾಗುವ ಬದಲು ಜನತೆಯ ಸಂಕಷ್ಟಗಳನ್ನು ಹೆಚ್ಚಿಸುವ ಕೆಲಸದಲ್ಲಿ ನಿರತವಾಗಿವೆ.

ಎಂಎಲ್‌ಸಿ ಚುನಾವಣೆ ಮತ್ತು ಉಪಚುನಾವಣೆಗಳು ಮುಗಿಯುವವರೆಗೆ ಕಾದು ಹೊಂಚಿ ಹಾಕಿ ಕುಳಿತಿದ್ದ ಬಿಜೆಪಿ ಸರ್ಕಾರವು ಚುನಾವಣೆ ಮುಗಿದ ಮರುದಿನವೇ ಇಂತಹ ದರ ಏರಿಕೆ ಮಾಡಿರುವುದು ಬಿಜೆಪಿ ಸರ್ಕಾರದ ನಯವಂಚಕ ಕ್ರಮಗಳ ಪ್ರತೀಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News