×
Ad

ತಪ್ಪು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅಮಿತ್ ಶಾ; 'ಹೊರಗಿನವರು' ಎಂದ ತೃಣಮೂಲ ಕಾಂಗ್ರೆಸ್

Update: 2020-11-06 16:45 IST
Photo: Twitter(@AmitShah)

ಕೊಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪಕ್ಷದ ಪೂರ್ವತಯಾರಿಗಾಗಿ ರಾಜ್ಯ ಭೇಟಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಬಂಕೂರ ಜಿಲ್ಲೆಯಲ್ಲಿ ರಾಜ್ಯದ ಖ್ಯಾತ ಆದಿವಾಸಿ ನಾಯಕ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲಾರ್ಪಣೆ ಮಾಡುವ ನಿಗದಿತ ಕಾರ್ಯಕ್ರಮದಂತೆ ಅಲ್ಲಿಗೆ ತೆರಳಿ ಮಾಲಾರ್ಪಣೆ ಮಾಡಿದ ನಂತರ ಆ ಪ್ರತಿಮೆ ಬಿರ್ಸಾ ಮುಂಡಾರದ್ದಲ್ಲ ಬದಲು ಸಾಮಾನ್ಯ ಆದಿವಾಸಿ ಬೇಟೆಗಾರನದ್ದು ಎಂದು ತಿಳಿದು ಬಂದ ಘಟನೆ ಸಾಕಷ್ಟು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಪ್ರತಿಮೆ ಬಿರ್ಸಾ ಮುಂಡಾರದ್ದಲ್ಲ ಎಂದು ಸ್ಥಳೀಯ ಆದಿವಾಸಿಗಳು ಗಮನಕ್ಕೆ ತರುತ್ತಿದ್ದಂತೆಯೇ ಬಿಜೆಪಿ ನಾಯಕರು ಅವಸವಸರದಲ್ಲಿ ಬಿರ್ಸಾ ಮುಂಡಾ ಭಾವಚಿತ್ರವನ್ನು ತಂದು ಅದನ್ನು ಆ ಪ್ರತಿಮೆಯ  ಪಾದದ ಬಳಿ ಇರಿಸಿದ ನಂತರ ಅಮಿತ್ ಶಾ ಅವರು ಅದಕ್ಕೆ ಮಾಲಾರ್ಪಣೆ ಮಾಡಿದ್ದಾರೆ.

ಆದಿವಾಸಿ ನಾಯಕ ಬಿರ್ಸಾ ಮುಂಡಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ 25ನೇ ವರ್ಷದಲ್ಲಿ ಹತ್ಯೆಗೀಡಾಗಿದ್ದರು. ಅವರಿಗೆ  ಗೌರವ ಅರ್ಪಿಸಿದ ಕುರಿತು ಅಮಿತ್ ಶಾ ಟ್ವೀಟ್ ಕೂಡ ಮಾಡಿದ್ದಾರೆ. ಆದಿವಾಸಿಗಳನ್ನು ಬಿಜೆಪಿಯತ್ತ ಸೆಳೆಯುವ ಭಾಗವಾಗಿ ಅಮಿತ್ ಶಾ ಬಂಕೂರ ಜಿಲ್ಲೆಗೆ ಭೇಟಿ ನೀಡಿದ್ದರು.

ಬಿರ್ಸಾ ಮುಂಡಾ ಬದಲು ಬೇರೊಂದು ಪ್ರತಿಮೆಗೆ ಗೌರವ ಸಲ್ಲಿಸಿರುವುದು ಅವರಿಗೆ ಮಾಡಿದ ಅವಮಾನವೆಂದು ಭಾರತ್ ಜಕತ್ ಮಝ್ಹಿ ಪರ್ಗಣ ಮಹಲ್ ಎಂಬ ಆದಿವಾಸಿಗಳ ಸಂಘಟನೆ ಆರೋಪಿಸಿದೆ. ಇಂದು ಸ್ಥಳೀಯ ಆದಿವಾಸಿಗಳು ಪ್ರತಿಮೆಯ ಸುತ್ತ ಗಂಗಾ ಜಲ ಚಿಮುಕಿಸಿ ಅದನ್ನು ಶುದ್ಧೀಕರಿಸಿದ್ದಾರೆ.

"ಬೊಹಾರಿಗತೊ(ಹೊರಗಿನವರು)ಕೇಂದ್ರ ಗೃಹ ಸಚಿವರಿಗೆ ಬಂಗಾಳ ಸಂಸ್ಕೃತಿಯ ಕುರಿತು ಯಾವುದೇ ಜ್ಞಾನವಿಲ್ಲ, ಅವರು ತಪ್ಪಾದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮುಂಡಾ ಭಾವಚಿತ್ರವನ್ನು ಬೇರೊಬ್ಬರ ಪಾದದ ಬಳಿ ಇರಿಸಿದ್ದಾರೆ. ಅವರು ಯಾವತ್ತಾದರೂ ಬಂಗಾಳವನ್ನು ಗೌರವಿಸುತ್ತಾರೆಯೇ?,'' ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

ತೃಣಮೂಲ ಸಂಸದೆ ನುಸ್ರತ್ ಜಹಾನ್ ಕೂಡ ಅಮಿತ್ ಶಾ ಗುರಿಯಾಗಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News