ಸಜಿಪನಡು ಗ್ರಾಮದ ಅಭಿವೃದ್ಧಿ ಸಂಸದರ ಆದರ್ಶ ಗ್ರಾಮವನ್ನು ಮೀರಿಸಿದೆ: ನಾಸಿರ್ ಸಜಿಪ
ಬಂಟ್ವಾಳ, ನ.6: ಸಜಿಪನಡು ಗ್ರಾಮ ಪಂಚಾಯತ್ ನಲ್ಲಿ ಎಸ್.ಡಿ.ಪಿ.ಐ. ಬೆಂಬಲಿತದ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜಿಪ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಐದು ವರ್ಷದ ಅಧಿಕಾರ ಅವಧಿಯಲ್ಲಿ ಮಾಡಿರುವ ವರದಿ 'ಸಾಧನೆಯ ಹಾದಿಯಲ್ಲಿ' ಕೈಪಿಡಿಯನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ನ ಸುಮಾರು 1.25 ಕೋಟಿ ರೂ. ಅನುದಾನದಲ್ಲಿ ನೀರು, ವಸತಿ, ಚರಂಡಿ, ತೋಟಗಾರಿಕೆ, ಎಸ್ಸಿ ಎಸ್ಟಿ, ರಸ್ತೆ ಅಭಿವೃದ್ಧಿ ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ಸುಮಾರು 1 ಕೋಟಿ ರೂ. ಖರ್ಚು ಮಾಡಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಿದೆ ಎಂದು ಅವರು ತಿಳಿಸಿದರು.
ಐದು ವರ್ಷ ಸಜಿಪನಡು ಗ್ರಾಮದಲ್ಲಿ ಮೂಲಭೂತ ಸೌಕರ್ಯ ಜನ ಮೆಚ್ಚುವ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ನೀರು, ದಾರಿದೀಪ, ರಸ್ತೆ, ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ ಜನರ ಆಶೋತ್ತರಗಳಿಗೆ ಆಡಳಿತ ಸ್ಪಂದಿಸಿದೆ ಎಂದು ವಿವರಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿಯಿಂದ ಪ್ರೇರೇಪಣೆಯಾಗಿ ಮಂಗಳೂರು ಶಾಸಕರ ನಿಧಿಯಲ್ಲಿ ಇದುವರೆಗೆ ಆಗದ ಅಭಿವೃದ್ದಿ ಕೆಲಸಗಳು ಆಗಿರುವುದು ಗ್ರಾಮ ಪಂಚಾಯತ್‍ನ 5 ವರ್ಷದ ಅಧಿಕಾರಕ್ಕೆ ಅಭಿಮಾನವಾಗಿದೆ. ಜಿಲ್ಲಾ ಪಂಚಾಯತ್ ಅನುದಾನ, ವಿಧಾನ ಪರಿಷತ್ ಸದಸ್ಯರ ಅನುದಾನವೂ ಈ ಅವಧಿಯಲ್ಲಿ ಲಭ್ಯವಾಗಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಗ್ರಾಮದ ಅಭಿವೃದ್ಧಿಗೆ ಪಕ್ಷದಿಂದಲೂ ಅನುದಾನಗಳು ಲಭ್ಯವಾಗಿದ್ದು ಉಚಿತ ಮಾಹಿತಿ ಮತ್ತು ಸೇವಾ ಕೆಂದ್ರ, ಬಸ್ ನಿಲ್ದಾಣ, ಹಲವು ಬೋರ್ ವೆಲ್ ವ್ಯವಸ್ಥೆ ಮಾಡಲಾಗಿದೆ. ಮಾಹಿತಿ ಕೇಂದ್ರದಿಂದ 1,022 ಆದಾಯ ಪ್ರಮಾಣ ಪತ್ರ, 1,043 ರೇಷನ್ ಕಾರ್ಡ್, 856 ಆಧಾರ್ ಕಾರ್ಡ್, 172 ವೋಟರ್ ಐಡಿ, 3,448 ವಿದ್ಯಾರ್ಥಿ ವೇತನ, 20 ಸರಕಾರಿ ಉದ್ಯೋಗ, 4 ಪ್ರವೇಶ ಪರೀಕ್ಷೆ, 64 ಅರಿವು ಸಾಲ, 47 ಶಾದಿ ಭಾಗ್ಯ, 324 ವಾಸ್ತವ ದೃಢೀಕರಣ, 25 ಹಿರಿಯ ನಾಗರಿಕರ ವೇತನ, 32 ವಿಧವಾ ವೇತನ, 14 ಅಂಗವಿಕಲ ವೇತನ, 385 ಆರ್.ಟಿ.ಸಿ., 167 ಕೆ.ಎಮ್.ಡಿ.ಸಿ. ಲೋನ್ ಸಹಿತ ಹಲವು ಪ್ರಯೋಜನವನ್ನು ಗ್ರಾಮಸ್ಥರು ಪಡೆದಿದ್ದಾರೆ. ಇದೊಂದು ಕ್ರಾಂತಿಕಾರಿ ಯೋಜನೆಯಾಗಿದ್ದು ಇದರ ಮಾಸಿಕ ಖರ್ಚನ್ನು ಪಕ್ಷವೇ ಭರಿಸುತ್ತಿದೆ ಎಂದು ಅವರು ತಿಳಿಸಿದರು.
ಅಗತ್ಯವಿರುವಲ್ಲಿ ಬೋರ್ ವೆಲ್ ಗಳನ್ನು ಕೊರೆದು ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಇದ್ದ ನೀರಿನ ಸಮಸ್ಯೆಗೆ ಪರಿಹಾರ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಗಮನ ಸೆಳೆದ ಕಂಚಿನಡ್ಕ ಪದವಿನ ಹಿಂದೂ ರುದ್ರಭೂಮಿಯು ನಮ್ನ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದೆ. ಗ್ರಾಮೋತ್ಸವದ ಮೂಲಕ ಮಕ್ಕಳ ಉಚಿತ ವೈದೈಕೀಯ ತಪಾಸನ ಶಿಬಿರ, ಹಿಜಾಮ ಚಿಕಿತ್ಸೆ, ಸ್ವಚ್ಚತಾ ಆಂದೋಲನ, ಕವಿಗೋಷ್ಠಿ ಮೊದಲಾದ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡು ಆಡಳಿತ ಜನಮನ್ನಣೆ ಗಳಿಸಿದೆ ಎಂದರು.
ಗ್ರಾಮದ ನಾಗರಿಕರಿಗೆ ಸರಕಾರದ ಎಲ್ಲಾ ಸರಕಾರಿ ಸೌಲಭ್ಯಗಳು ಒಂದೆಡೆ ಸಿಗುವ ನಿಟ್ಟಿನಲ್ಲಿ 'ಸಜಿಪ ಒನ್' ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿರುವುದು ಗ್ರಾಮಸ್ಥರಿಗೆ ತುಂಬಾ ಅನುಕೂಲಕರವಾಗಿದೆ. ಈ ವ್ಯವಸ್ಥೆ ಇಡೀ ರಾಜ್ಯದ ಗ್ರಾಮೀಣ ಭಾಗದಲ್ಲಿ ನಡೆದ ಮೊದಲ ಪ್ರಯೋಗವಾಗಿದ್ದು ಗ್ರಾಮಸ್ಥರಿಂದ ಪ್ರಶಂಶೆಗೆ ಪಾತ್ರವಾಗಿದೆ. ಹಾಗೆಯೇ ಸಜಿಪನಡು ಗ್ರಾಮದಲ್ಲಿ ಪೆಡಂಭೂತ ಸಮಸ್ಯೆಯಾದ ಬಂಟ್ವಾಳ ಪುರಸಭೆಯ ಘನತ್ಯಾಜ್ಯ ಘಟಕದ ಸಮಸ್ಯೆಗೆ ಪರಿಹಾರ ಒದಗಿಸಿದ್ದು ಎಸ್.ಡಿ.ಪಿ.ಐ. ಹಾಗೂ ಗ್ರಾಪಂ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.
ಐದು ವರ್ಷದ ಅವಧಿಯಲ್ಲಿ ಸಜಿಪನಡು ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯ ಸಂಸದರ ಆದರ್ಶ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮೀರಿದೆ ಎಂದು ಹೇಳಬಹುದು. ಆದರೂ ಗ್ರಾಮದಲ್ಲಿ ಇನ್ನೂ ಕೆಲವು ಸಮಸ್ಯೆಗಳು ಇವೆ. ಅಭಿವೃದ್ಧಿ ಕೆಲಸಗಳೂ ನಡೆಯ ಬೇಕಾಗಿದೆ. ಮುಂದಿನ ಸಮಯದಲ್ಲಿ ಅದಕ್ಕಾಗಿ ಶ್ರಮಿಸಲಾಗುವುದು ಎಂದು ಮುಹಮ್ಮದ್ ನಾಸಿರ್ ತಿಳಿಸಿದರು.
ಎಸ್.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಸಜಿಪನಡು ಗ್ರಾಮ ಚುನಾವಣಾ ಸಮಿತಿ ಅಧ್ಯಕ್ಷ ಎಸ್.ಎನ್.ಅಬ್ದುಲ್ ರಹಿಮಾನ್, ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷ ನವಾಝ್ ಸಜಿಪ, ನೌಷಾದ್, ಇಕ್ಬಾಲ್ ಬೈಲಗುತ್ತು ಮೊದಲಾದವರು ಉಪಸ್ಥಿತರಿದ್ದರು.