ವಿನಯ್ ಕುಲಕರ್ಣಿ ಮನೆಗೆ ಲಿಂಗಾಯತ ಸ್ವಾಮಿಜಿಗಳು ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಲ್ಲ: ಜಗದೀಶ್ ಶೆಟ್ಟರ್
ಉಡುಪಿ, ನ.6: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರವಾಗಿ ಲಿಂಗಾಯತ ಸ್ವಾಮಿಜಿಗಳು ವಿನಯ್ ಕುಲಕರ್ಣಿ ಮನೆಗೆ ಭೇಟಿ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ. ನಾನು ರಾಜಕೀಯವಾಗಿ ಮಾತ್ರ ಉತ್ತರ ಕೊಡುತ್ತಿದ್ದೇನೆ. ಸ್ವಾಮೀಜಿಗಳಿಗೆ ನಾನು ಏನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐ ಸ್ವತಂತ್ರ ತನಿಖಾ ತಂಡವಾಗಿದ್ದು, ಅದು ಸ್ವತಂತ್ರವಾಗಿ ಕೆಲಸ ಮಾಡುತ್ತದೆ. ಕುಲಕರ್ಣಿ ವಿಚಾರದಲ್ಲಿ ಅವರನ್ನು ತನಿಖೆ ಮಾಡಲು ಬಿಡಿ. ಅವರು ತಪ್ಪು ಮಾಡದಿದ್ದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ಎಲ್ಲವನ್ನು ಹಳದಿ ಕಣ್ಣಿನಿಂದ ನೋಡುವುದು ಸರಿಯಲ್ಲ. ಈ ಹಿಂದೆ ಯುಪಿಎ ಸರಕಾರ ಇದ್ದಾಗ ಜನಾರ್ದನ ರೆಡ್ಡಿ ಹಾಗೂ ಇತರ ಬಿಜೆಪಿ ನಾಯಕರನ್ನು ಸಿಬಿಐ ಬಂಧಿಸಿದಾಗ, ನಾವು ಅದನ್ನು ರಾಜಕೀಯವಾಗಿ ಟೀಕೆ ಮಾಡಿಲ್ಲ ಎಂದರು.
ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಹಿಂದಿನಿಂದಲೂ ಭಿನ್ನಾಭಿಪ್ರಾಯ ಇದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ. ಬಹಿರಂಗ ವಾಗಿ ಸಿಎಂ ಆಗುವ ಹೇಳಿಕೆಗಳನ್ನು ಕೊಡುತ್ತಿ ದ್ದಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಕೆಲವು ಶಾಸಕರು ಹೇಳುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಒಳಗಿಂದೊಳಗೆ ಕತ್ತಿ ಮಸೆಯುತ್ತಿದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರು ಯಾವಾಗ ಹೊಡೆಯುತ್ತಾರೆ ಎಂಬುದು ಇನ್ನು ಬಹಿರಂಗ ವಾಗಬೇಕಾಗಿದೆ ಎಂದರು.
ಮಸ್ಕಿ ಮತ್ತು ಬಸವಕಲ್ಯಾಣದಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಪಕ್ಷದ ಒಳಗೆ ಅಭ್ಯರ್ಥಿ ಬಗ್ಗೆ ಇನ್ನೂ ಚರ್ಚೆಗಳು ನಡೆದಿಲ್ಲ. ಕೇವಲ ಮಾಧ್ಯಮ ಗಳಲ್ಲಿ ಮಾತ್ರ ಈ ವಿಚಾರ ಪ್ರಚಾರ ಪಡೆಯುತ್ತಿದೆ. ವಿಜಯೇಂದ್ರ ತಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಕೇಳಿಲ್ಲ. ಪಕ್ಷದ ಒಳಗೂ ವಿಜಯೇಂದ್ರ ಹೆಸರು ಚರ್ಚೆಗೆ ಬಂದಿಲ್ಲ. ಮಾಧ್ಯಮಗಳೇ ಚರ್ಚೆ ಮಾಡಿ ಅಭಿಪ್ರಾಯ ಪಡೆಯುತ್ತಿದೆ ಎಂದು ಅವರು ತಿಳಿಸಿದರು.