ಅಪಹರಣಕ್ಕೊಳಗಾದ ಬಾಲಕಿ ಪತ್ತೆ: ಪೋಕ್ಸೊ ಪ್ರಕರಣ ದಾಖಲು

Update: 2020-11-06 15:51 GMT

ಹಿರಿಯಡ್ಕ, ನ.6: ಕೆಲವು ದಿನಗಳ ಹಿಂದೆ ಅಪಹರಣಕ್ಕೆ ಒಳಗಾದ ಅಪ್ರಾಪ್ತೆಯನ್ನು ನ.5ರಂದು ಉತ್ತರ ಕನ್ನಡ ಜಿಲ್ಲೆಯ ಬೆಳ್ಕೆ ಎಂಬಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಕ್ಸೋ ಕಾಯಿದೆಯಡಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿ, ಉಡುಪಿಯ ಬಾಲ ನ್ಯಾಯ ಮಂಡಳಿಯ ಮುಂದೆ ಇಂದು ಹಾಜರುಪಡಿಸಿದ್ದಾರೆ. ಬಳಿಕ ಬಾಲಕನನ್ನು ಸರಕಾರಿ ವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ.

ಅ.28ರಂದು ಬಾಲಕಿಯನ್ನು ಅಪಹರಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿಯ ಪತ್ತೆಗಾಗಿ ಉಡುಪಿ ಎಸ್ಪಿ ವಿಷ್ಣುವರ್ದನ್ ಮತ್ತು ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಂತೆ ಡಿವೈಎಸ್ಪಿ ಜೈಶಂಕರ್ ನಿರ್ದೇಶನದಲ್ಲಿ ಮೂರು ತಂಡ ಗಳನ್ನು ರಚಿಸಲಾಗಿತ್ತು.

ಇದೀಗ ಬಾಲಕಿ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪತ್ತೆ ಹಚ್ಚಿರುವ ಪೊಲೀಸರು, ಈ ಕುರಿತು ಪೊಕ್ಸೋ ಕಾಯಿದೆ ಯಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಡಿಸಿಐಬಿ ನಿರೀಕ್ಷಕ ಮಂಜಪ್ಪ, ಹಿರಿಯಡ್ಕ ಎಸ್ಸೈ ಸುಧಾಕರ ತೋನ್ಸೆ , ಬ್ರಹ್ಮಾವರ ಎಸ್ಸೈ ರಾಘವೇಂದ್ರ ನೇತೃತ್ವದ ತಂಡ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News