ಶಿಕ್ಷಕರಿಗೆ ಕೊರೋನ ಸೋಂಕು: 84 ಶಾಲೆಗಳು ಮತ್ತೆ ಬಂದ್
ಡೆಹ್ರಾಡೂನ್, ನ. 6: 80 ಶಿಕ್ಷಕರಿಗೆ ಕೋರೋನ ಸೋಂಕು ದೃಢಪಟ್ಟ ಬಳಿಕ ಗರ್ಹ್‌ವಾಲ್ ವಿಭಾಗದ ಪುರಿ ಜಿಲ್ಲೆಯ ಐದು ಬ್ಲಾಕ್‌ಗಳ 84 ಶಾಲೆಗಳನ್ನು 5 ದಿನಗಳ ಕಾಲ ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ನವೆಂಬರ್ 2ರಂದು ಶಾಲೆಗಳನ್ನು ತೆರೆಯಲಾಗಿತ್ತು.
ಪುರಿ ಜಿಲ್ಲೆಯ ಖಿರ್ಸು, ಪುರಿ, ಕೋಟ್, ಪಾಬೊ ಹಾಗೂ ಕಲ್ಜಿಖಾನ್ ಬ್ಲಾಕ್‌ನ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 80 ಶಿಕ್ಷಕರಿಗೆ ಗುರುವಾರ ಕೊರೋನ ಸೋಂಕು ದೃಢಪಟ್ಟಿತ್ತು.
ಶಾಲೆಗಳಿಗೆ ನಿಯೋಜಿಸಲಾಗಿರುವ ಶಿಕ್ಷಕರಿಗೆ ಕೊರೋನ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯದ 13 ಜಿಲ್ಲೆಗಳ ದಂಡಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಕೂಡ ಪ್ರಮಾಣಿತ ಕಾರ್ಯ ವಿಧಾನ (ಎಸ್‌ಒಪಿ)ವನ್ನು ಜಾರಿಗೊಳಿಸಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಹೇಳಿದ್ದಾರೆ.
ಚಳಿಗಾಲದಲ್ಲಿ ಕೊರೋನ ಸೋಂಕು ಇನ್ನಷ್ಟು ಹರಡುವ ಸಾಧ್ಯತೆ ಇದೆ ಎಂದು ಹೇಳಿರುವ ನೇಗಿ, ಹಬ್ಬಗಳ ಕಾಲದಲ್ಲಿ ಕೊರೋನ ಶಿಷ್ಟಾಚಾರಗಳನ್ನು ಅನುಸರಿಸುವಂತೆ ಜನರನ್ನು ಆಗ್ರಹಿಸಿದ್ದಾರೆ.