ಬಿಜೆಪಿ ಕಾರ್ಯಕಾರಿಣಿ ಸಭೆ ಜನರ ಕಣ್ಣಿಗೆ ಮಣ್ಣೆರಚಿದ್ದು ಮಾತ್ರ: ಯು.ಟಿ.ಖಾದರ್

Update: 2020-11-06 16:53 GMT

ಮಂಗಳೂರು, ನ.6: ನಗರದಲ್ಲಿ 20 ವರ್ಷಗಳ ಬಳಿಕ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವೇ ಹೊರತು ಸರಕಾರಕ್ಕೆ ಜನಪರ ಕಾರ್ಯಕ್ರಮಗಳ ಕುರಿತು ಯಾವುದೇ ನಿರ್ದೇಶನವನ್ನು ನೀಡಲಾಗಿಲ್ಲ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷದ ಸಭೆಯಿಂದ ರಾಜ್ಯ ಹಾಗೂ ಜಿಲ್ಲೆಯ ಜನತೆಗೆ ಯಾವುದೇ ಕೊಡುಗೆಯನ್ನು ನೀಡಿಲ್ಲ. ಪಕ್ಷದ ಒಳ ಜಗಳದ ಚರ್ಚೆಗೆ ಇಲ್ಲಿ ಸಭೆ ಮಾಡುವ ಅಗತ್ಯವಿತ್ತೇ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಯುವ ಜನತೆಯ ನಿರುದ್ಯೋಗದ ಸಮಸ್ಯೆಯಾಗಲಿ, ಕೋವಿಡ್ ಹಿನ್ನೆಲೆಯಲ್ಲಿ ಮುಂಬೈ ಹಾಗೂ ವಿದೇಶಗಳಿಂದ ಬಂದವರಿಗೆ ಉದ್ಯೋಗದ ಕುರಿತು, ವಸತಿ ಯೋಜನೆಯಡಿ ಮನೆ ನೀಡುವ ಕುರಿತು ಸರಕಾರಕ್ಕೆ ಸ್ಪಷ್ಟ ನಿರ್ದೇಶನವನ್ನು ಸಭೆಯ ಮೂಲಕ ನೀಡಲಾಗಿಲ್ಲ. ಕನಿಷ್ಠ ಮರಳಿಗೆ ಸಂಬಂಧಿಸಿ ಪರಿಹಾರವನ್ನೂ ನೀಡಲಾಗಿಲ್ಲ. ಪಡಿತರ ಚೀಟಿಗೆ ಸಂಬಂಧಿಸಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸ ಲಾಗುತ್ತಿಲ್ಲ. ತುಳುವರ ಬೇಡಿಕೆಯಂತೆ ತುಳು ಭಾಷೆಯನ್ನು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸುವ ಕುರಿತಂತೆಯೂ ನಿರ್ಣಯ ಮಾಡಲಾಗಿಲ್ಲ. ಈ ರೀತಿಯಾಗಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನತೆ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು.

ಕಾರ್ಯಕಾರಿಣಿ ಸಭೆಗೆ ಸಿಡಿಸಿದ ಪಟಾಕಿ ದೀಪಾವಳಿಗೇಕೆ ನಿಷೇಧ ?

ಬಿಜೆಪಿಯ ಕಾರ್ಯಕಾರಿಣಿ ಸಭೆಯ ಸಂದರ್ಭದಲ್ಲೂ ಪಟಾಕಿ ಸಿಡಿಸಲು ಅವಕಾಶ ನೀಡಿ ದೀಪಾವಳಿ ಹತ್ತಿರವಾಗುವಂತೆಯೇ ನಿಷೇಧ ಹೇರುವ ಸರಕಾರದ ನಿರ್ಧಾರ ಗೊಂದಲಮಯ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಕಾರ್ಖಾನೆಯಲ್ಲಿ ತಯಾರಿಕೆಗೆ ಅವಕಾಶ ನೀಡಿ, ಕೆಲ ವ್ಯಾಪಾಸ್ಥರು ಸರಕಾರಕ್ಕೆ ತೆರಿಗೆ ಹಣ ಪಾವತಿಸಿ ಈಗಾಗಲೇ ಖರೀದಿಸಿ, ಇದೀಗ ಅದನ್ನು ಮಾರಾಟ ಮಾಡುವ ಸಂದರ್ಭ ನಿಷೇಧ ಮಾಡುವುದೆಂದರೆ ಏನರ್ಥ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.

ನಮ್ಮ ಜಿಲ್ಲೆಯಲ್ಲೇ ದೀಪಾವಳಿ ನಂಬಿ ಬದುಕುವವರು ಹಲವಾರು ಮಂದಿ ಇದ್ದಾರೆ. ತೆರಿಗೆ ಪಾವತಿಸಿ ಈಗಾಗಲೇ ಶಿವಕಾಶಿ ಸೇರಿದಂತೆ ಹಲವು ಕಡೆಗಳಿಂದ ಪಟಾಕಿ ಖರೀದಿಸಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಹಾಗಿರುವಾಗ ಈ ತರಹ ಮುನ್ಸೂಚನೆಯನ್ನೂ ನೀಡದೆ ನಿಷೇಧಿಸಿರುವ ಸರಕಾರವೇ ವ್ಯಾಪಾರಿಗಳು ಖರೀದಿಸಿದ ಪಟಾಕಿಯನ್ನು ಖರೀದಿಸಿ ಅವರಿಗೆ ಪರಿಹಾರ ನೀಡಲಿ.
- ಮಿಥುನ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News