ಟೋಯಿಂಗ್ ವಾಹನಕ್ಕೆ ಅಡ್ಡಿ: ಪ್ರಕರಣ ದಾಖಲು
ಮಂಗಳೂರು, ನ.6: ನಗರದ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ರಸ್ತೆ ಬದಿ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಟೋಯಿಂಗ್ ಮಾಡಿ ಸಾಗಿಸುತ್ತಿದ್ದಾಗ ದ್ವಿಚಕ್ರ ವಾಹನದ ಮಾಲಕರೊಬ್ಬರು ಬಂದು ಟೋಯಿಂಗ್ ವಾಹನದ ಮುಂಭಾಗದಲ್ಲಿ ನಿಂತು ತಡೆ ಒಡ್ಡಿದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಸಂಚಾರ ಪಶ್ಚಿಮ ಠಾಣೆಯ ಎಎಸ್‌ಐ ಸೂರಜ್ ಶೆಟ್ಟಿ ನೀಡಿದ ದೂರಿನನ್ವಯ ದ್ವಿಚಕ್ರ ವಾಹನದ ಮಾಲಕನ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಪ್ರಕರಣ ದಾಖಲಿಸಲಾಗಿದೆ.
ಟೋಯಿಂಗ್ ವಾಹನದಲ್ಲಿ ಈ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಿಂದ ಎತ್ತಿ ಸಾಗಿಸುತ್ತಿರುವ ಹಾಗೂ ಈ ಸಂದರ್ಭದಲ್ಲಿ ವಾಹನದ ಮಾಲಕ ಬಂದು ತಡೆ ಒಡ್ಡಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದ್ವಿಚಕ್ರ ವಾಹನದ ಮಾಲಕ ಬಂದು ಟೋಯಿಂಗ್ ವಾಹನಕ್ಕೆ ತಡೆ ಒಡ್ಡಿದ ಸಂದರ್ಭದಲ್ಲಿ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಹತೋಟಿಗೆ ತಂದಿದ್ದರು ಎಂದು ತಿಳಿದುಬಂದಿದೆ.