ಬಾಲ್ಯದ ಹೀರೊ ಸಾಂಪ್ರಸ್ ದಾಖಲೆ ಸರಿಗಟ್ಟಿದ ಜೊಕೊವಿಕ್
Update: 2020-11-07 15:31 IST
ಪ್ಯಾರಿಸ್: ವರ್ಷಾಂತ್ಯದಲ್ಲಿ ಆರನೇ ಬಾರಿ ವಿಶ್ವದ ನಂ.1 ಸ್ಥಾನವನ್ನು ಕಾಯ್ದುಕೊಂಡಿರುವ ನೊವಾಕ್ ಜೊಕೊವಿಕ್ ತಮ್ಮ ಬಾಲ್ಯದ ಹೀರೊ ಪೀಟ್ ಸಾಂಪ್ರಸ್ ದಾಖಲೆಯನ್ನು ಸರಿಗಟ್ಟಿದರು.
33ರ ಹರೆಯದ ಜೊಕೊವಿಕ್‌ಗೆ ಸ್ಪರ್ಧೆಯೊಡ್ಡಬಲ್ಲ ಏಕೈಕ ಆಟಗಾರ ರಫೆಲ್ ನಡಾಲ್ ಮುಂದಿನ ವಾರ ಆರಂಭವಾಗಲಿರುವ ಸೊಫಿಯಾ ಸ್ಪರ್ಧೆಯಿಂದ ಹೊರಗುಳಿದರು. ಈ ಹಿನ್ನೆಲೆಯಲ್ಲಿ ಜೊಕೊವಿಕ್ ನಂ.1 ಸ್ಥಾನವನ್ನು ದೃಢಪಡಿಸಿಕೊಂಡರು.
ಜೊಕೊವಿಕ್ 2011,2012, 2014,2015 ಹಾಗೂ 2018ರಲ್ಲಿ ವರ್ಷಾಂತ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರನ ಸ್ಥಾನವನ್ನು ಕಾಯ್ದುಕೊಂಡಿದ್ದರು.
"ನಾನು ಪೀಟ್ ಸಾಂಪ್ರಸ್‌ರನ್ನು ನೋಡುತ್ತಾ ಬೆಳೆದಿದ್ದೇನೆ. ಅವರ ದಾಖಲೆಯನ್ನು ಸರಿಗಟ್ಟಿರುವ ಮೂಲಕ ನನ್ನ ಕನಸು ನನಸಾಗಿದೆ'' ಎಂದು 17 ಗ್ರಾನ್ ಸ್ಲಾಮ್ ಪ್ರಶಸ್ತಿ ಜಯಿಸಿರುವ ಸರ್ಬಿಯದ ಸ್ಟಾರ್ ಆಟಗಾರ ಹೇಳಿದ್ದಾರೆ.