ಕಿರುಕುಳದ ವಿರುದ್ಧ ದೂರು ನೀಡಲು ಹೋಗಿದ್ದ ಬಾಲಕಿಗೆ ಥಳಿಸಿದ ಆರೋಪ : ಬಜ್ಪೆ ಪೊಲೀಸರ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ನ.7: ಯುವಕನ ಕಿರುಕುಳದಿಂದ ಬೇಸತ್ತು ದೂರು ನೀಡಲು ಬಜ್ಪೆ ಪೊಲೀಸ್ ಠಾಣೆಗೆ ತೆರಳಿದ್ದ ಸಂತ್ರಸ್ತೆ ಬಾಲಕಿಗೆ ರಕ್ಷಣೆ ನೀಡಬೇಕಾಗಿದ್ದ ಮೂವರು ಮಹಿಳಾ ಪೊಲೀಸರು ಬಾಲಕಿಯನ್ನೇ ಹಿಗ್ಗಾಮುಗ್ಗ ಥಳಿಸಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಪೊಲೀಸರ ಹಲ್ಲೆಯಿಂದ ಬಾಲಕಿ ನಡೆಯಲಾರದ ಪರಿಸ್ಥಿತಿಗೆ ತಲುಪಿದ್ದು, ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೌರ್ಜನ್ಯ ಎಸಗಿದ ಬಜ್ಪೆ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗಳಾದ ರಕ್ಷಿತಾ ಸೇರಿದಂತೆ ಮೂವರ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಗರ ಪೊಲೀಸ್ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಪ್ರಕರಣವನ್ನು ಮಕ್ಕಳ ಕಲ್ಯಾಣ ಸಮಿತಿಯೂ ಗಂಭೀರವಾಗಿ ತೆಗೆದುಕೊಂಡಿದ್ದು, ಪ್ರಕರಣದ ಸಂಪೂರ್ಣ ವರದಿ ನೀಡಲು ಪೊಲೀಸ್ ಆಯುಕ್ತರಿಗೆ ಆದೇಶ ಮಾಡಿದೆ.
ಠಾಣೆಯಲ್ಲೇ ಥಳಿಸಿದ ಪೊಲೀಸರು !
ಗಂಜಿಮಠದ 16ರ ಹರೆಯದ ಬಾಲಕಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕ ಶ್ರೀಕಾಂತ ಎಂಬಾತ ಕಿರುಕುಳ ನೀಡುತ್ತಿದ್ದು, ಈ ಕುರಿತು ದೂರು ನೀಡಲು ಪೋಷಕರೊಂದಿಗೆ ಬಾಲಕಿ ನ.4ರಂದು ಬಜ್ಪೆ ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ಕಿರುಕುಳ ನೀಡುತ್ತಿದ್ದ ಯುವಕನನ್ನೂ ಠಾಣೆಗೆ ಕರೆಸಿದ್ದಾರೆ. ಬಳಿಕ ಬಾಲಕಿಯ ಪೋಷಕರನ್ನು ಹೊರಗೆ ಕುಳ್ಳಿರಿಸಿ, ಬಾಲಕಿ ಮತ್ತು ಯುವಕನನ್ನು ವಿಚಾರಣೆ ನೆಪದಲ್ಲಿ ಒಳಗೆ ಕರೆದೊಯ್ದಿದ್ದಾರೆ. ಬಳಿಕ ಮೂವರು ಮಹಿಳಾ ಪೊಲೀಸರು ಲಾಠಿಯಿಂದ ಬಾಲಕಿ ಮೇಲೆ ಮನಬಂದಂತೆ ಥಳಿಸಿದ್ದಾರೆ. ಆದರೆ ಯುವಕನಿಗೆ ಏನೂ ಮಾಡದೆ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ದೌರ್ಜನ್ಯದಿಂದ ಬಾಲಕಿಯ ಎರಡೂ ತೋಳುಗಳಲ್ಲಿ ರಕ್ತ ಹೆಪ್ಪುಗಟ್ಟಿದೆ. ಕಾಲಿನ ಪಾದ, ಸೊಂಟಕ್ಕೂ ಲಾಠಿಯಿಂದ ಹೊಡೆದಿದ್ದರಿಂದ ಬಾಲಕಿ ನಡೆಯಲಾಗದ ಪರಿಸ್ಥಿತಿ ತಲುಪಿದ್ದಾಳೆ. ತೀವ್ರ ದೈಹಿಕ ನೋವು ಉಲ್ಭಣಿಸಿದ್ದರಿಂದ ಮಾರನೇ ದಿನ ವೆನ್ಲಾಕ್ ಆಸ್ಪತ್ರೆಗೆ ಆಕೆಯನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಾಲಕಿಯ ಬೆನ್ನಿನ ಮೇಲೂ ಬೂಟುಗಾಲುಗಳಿಂದ ಒದ್ದ ಗುರುತುಗಳು ಕಂಡುಬಂದಿವೆ ಅವರು ತಿಳಿಸಿದ್ದಾರೆ.
ಬಾಲಕಿಯ ಹೆತ್ತವರು ಕಡು ಬಡವರಾಗಿದ್ದು, ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಸಲಾಗಿತ್ತು. ಮಾರನೇ ದಿನ ಸಾರ್ವಜನಿಕ ದೂರು ಮಕ್ಕಳ ಕಲ್ಯಾಣ ಸಮಿತಿಗೆ ಹೋಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸಮಿತಿಯ ಸದಸ್ಯರು ಆಸ್ಪತ್ರೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಬಳಿಕ ತುರ್ತು ಸಭೆ ನಡೆಸಿ ಪೊಲೀಸ್ ಆಯುಕ್ತರಿಗೆ ಘಟನೆ ಬಗ್ಗೆ ಹಾಗೂ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಲು ಸಮಿತಿ ಆದೇಶಿಸಿದೆ. ಈ ನಡುವೆ ಬಾಲಕಿಯ ತಂದೆ ಕೂಡ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೌರ್ಜನ್ಯ ಎಸಗಿದ ಮಹಿಳಾ ಪೊಲೀಸರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 323 ( ಸ್ವಯಂಪ್ರೇರಿತ ಹಲ್ಲೆ), 324 (ಮಾರಕಾಯುಧದಿಂದ ಹಲ್ಲೆ), 504 (ನಿಂದನೆ), 34 (ಹಲವರಿಂದ ಕೃತ್ಯ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಬಾಲಕಿ ಅಪ್ರಾಪ್ತೆ ಆಗಿರುವುದರಿಂದ ಮಕ್ಕಳ ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ ಅಡಿಯಲ್ಲೂ ದಾಖಲಿಸಬೇಕಾಗುತ್ತದೆ. ಪ್ರಕರಣ ಸರಿಯಾಗಿ ದಾಖಲು ಮಾಡಿಲ್ಲ ಎಂದು ಮಕ್ಕಳ ಹಕ್ಕು ಆಯೋಗಕ್ಕೆ ಬರೆಯಲಾಗುವುದು. ನಂತರ ಅಲ್ಲಿಂದ ಬರುವ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
ಎಫ್‌ಐಆರ್‌ನಲ್ಲಿದ್ದ ಇನ್ನಿಬ್ಬರ ಹೆಸರು ಕಾಣೆ !
ಮಹಿಳಾ ಪೊಲೀಸ್ ಸಿಬ್ಬಂದಿ ವಿರುದ್ಧ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಓರ್ವ ಸಿಬ್ಬಂದಿ ‘ರಕ್ಷಿತಾ’ ಹೆಸರು ಮಾತ್ರ ದಾಖಲಿಸಲಾಗಿದ್ದು, ಉಳಿದ ‘ಇಬ್ಬರು ಮಹಿಳಾ ಸಿಬ್ಬಂದಿ’ ಎಂದು ಮಾತ್ರ ನಮೂದಿಸಲಾಗಿದೆ. ಹೆಸರನ್ನೇ ದಾಖಲಿಸಿಲ್ಲ. ನೊಂದ ಬಾಲಕಿಗೆ ಲಾಠಿಯಿಂದ ಬಲ ಹಾಗೂ ಎಡತೋಳಿಗೆ ಮತ್ತು ಎರಡೂ ಕಾಲಿನ ಅಡಿಗೆ ಹಾಗೂ ಸೊಂಟಕ್ಕೆ ಬಲವಾಗಿ ಹೊಡೆದಿದ್ದಾರೆ. ಅಲ್ಲದೆ, ಅಲ್ಲಿದ್ದ ಕಪ್ಪು ಬಣ್ಣದ ಮಹಿಳಾ ಪೊಲೀಸರೊಬ್ಬರು ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಲಾಠಿಯಿಂದ ಹೊಡೆದಿದ್ದರಿಂದ ರಕ್ತ ಹೆಪ್ಪುಗಟ್ಟಿದ ಗಾಯವಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ತನಿಖೆಗೆ ಉನ್ನತ ಅಧಿಕಾರಿ ನೇಮಕವಾಗಲಿ: ಐವನ್ ಡಿಸೋಜ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಐವನ್ ಡಿಸೋಜ ಮತ್ತು ಮಾಜಿ ಶಾಸಕ ಜೆ.ಆರ್. ಲೋಬೊ ನೇತೃತ್ವದ ನಿಯೋಗ ಬಾಲಕಿಯನ್ನು ಭೇಟಿಯಾಗಿ ಮಾಹಿತಿ ಪಡೆದಿದೆ.
ಬಜ್ಪೆ ಮಹಿಳಾ ಪೊಲೀಸ್ ಸಿಬ್ಬಂದಿ ವರ್ತನೆ ಪೊಲೀಸರ ನೀತಿ ಸಂಹಿತೆಗೆ ವಿರುದ್ಧವಾಗಿದ್ದು, ಕೂಡಲೇ ಆರೋಪಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಾದರೆ ಉನ್ನತ ಅಧಿಕಾರಿಯನ್ನು ನೇಮಕ ಮಾಡಬೇಕು. ಕ್ರಮ ಕೈಗೊಳ್ಳದೆ ಇದ್ದರೆ ರಾಜ್ಯ ಮಟ್ಟದ ಹೋರಾಟ ನಡೆಸುವುದಾಗಿಯೂ ಐವನ್ ಡಿಸೋಜ ಎಚ್ಚರಿಸಿದ್ದಾರೆ.
ತನಿಖೆ ಬಳಿಕ ಸೂಕ್ತ ಕ್ರಮ: ಕಮಿಷನರ್
ಮಹಿಳಾ ಪೊಲೀಸ್ ಸಿಬ್ಬಂದಿ ವಿರುದ್ಧದ ಪ್ರಕರಣದ ತನಿಖೆಗೆ ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ನಿಯುಕ್ತಿಗೊಳಿಸ ಲಾಗಿದೆ. ತನಿಖೆ ಬಳಿಕ ನೈಜ ವಿಚಾರ ಗೊತ್ತಾಗಲಿದ್ದು, ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯುವಕನ ಕಿರುಕುಳದ ಕುರಿತು ಬಾಲಕಿಯ ಹೆತ್ತವರು ಇನ್ನೂ ಕೂಡ ಲಿಖಿತ ದೂರು ನೀಡಿಲ್ಲ. ದೂರು ನೀಡಿದ ತಕ್ಷಣ ಅದರ ಬಗ್ಗೆಯೂ ತನಿಖೆ ನಡೆಸಲಿದ್ದೇವೆ ಎಂದು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.