×
Ad

ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರಂತೆ ಸಮಾನರು: ಸಿಇಓ ಡಾ.ಭಟ್

Update: 2020-11-07 20:05 IST

 ಉಡುಪಿ, ನ.7: ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ಅಸಮಾನತೆಯಿಂದ ನೋಡುತ್ತಿದ್ದು, ಇದರಿಂದ ಅವರು ಅನೇಕ ರೀತಿಯ ಸಮಸ್ಯೆ ಗಳನ್ನು ಎದುರಿ ಸುತ್ತಿದ್ದಾರೆ. ಇದಕ್ಕಾಗಿ ಜನಸಾಮಾನ್ಯರಲ್ಲಿ ಲಿಂಗತ್ವದ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ ನವೀನ್ ಭಟ್ ವೈ ಹೇಳಿದ್ದಾರೆ.

ಶನಿವಾರ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಹಾಗೂ ಸಾರಥ್ಯ ಪಯಣ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಶ್ರಯ ಸಮುದಾಯ ಸಂಘಟನೆ ನೇತೃತ್ವದಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ವಕಲತ್ತು ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾನೂನಿನಡಿಯಲ್ಲಿ ಎಲ್ಲರೂ ಒಂದೇ. ಸಮಾಜದಲ್ಲಿರುವ ಎಲ್ಲರಿಗೂ ಅವರದೇ ಆದ ಸ್ಥಾನಮಾನವಿದೆ. ಲಿಂಗತ್ವಬೇಧ ಸಲ್ಲದು. ಜಿಲ್ಲೆಯಲ್ಲಿ 5 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾತ್ರ ಈವರೆಗೆ ವಸತಿ ನಿವೇಶನ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಸರಕಾರದ ನಿವೇಶನವನ್ನು ಆದ್ಯತೆ ಮೇರೆಗೆ ಸಮುದಾಯ ಮೂಲಕ ನೀಡಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೀಕ್ಷಕಿ ಚಂದ್ರಿಕಾ, ಜಿಲ್ಲಾ ಲಿಂಗತ್ವ ಅಲ್ಪಸಂಖ್ಯಾತರ ಮೈತ್ರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯ ವಾಹಿನಿಗೆ ತರಲು ಹಲವಾರು ಯೋಜನೆ ಗಳನ್ನು ರೂಪಿಸಲಾಗಿದೆ. ಸ್ವ-ಉದ್ಯೋಗ ತರಬೇತಿ, ಶಿಕ್ಷಣ, ಮೂಲಸೌಕರ್ಯ ಒದಗಿಸಿ ಸ್ವಾವಲಂಬಿಗಳಾಗಿ ಬದುಕಲು ಬೆಂಬಲ ಹಾಗೂ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಅಲ್ಲದೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಅವರಿಗೆ ನೀಡಲಾಗುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ಬಾಲನ್ಯಾಯ ಮಂಡಳಿಯ ಸದಸ್ಯೆ ಹಾಗೂ ವಕೀಲೆ ಅಮೃತ ಕಲಾ ಸಿ.ಎಸ್ ಮಾತನಾಡಿ, ಜಿಲ್ಲೆಯಲ್ಲಿ 85 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದು, ನೋಂದಣಿ ಮಾಡಿಸಿಕೊಂಡವರ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಉಳಿದವರೂ ಸಹ ನೊಂದಣಿ ಮಾಡಿಕೊಳ್ಳಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾನೂನಿನಡಿಯಲ್ಲಿ ಸಮಾನವಾಗಿ ಮೂಲಭೂತ ಹಕ್ಕುಗಳನ್ನು ನೀಡಿದ್ದು, ಮತದಾನ ಮಾಡುವ ಹಕ್ಕನ್ನೂ ಸಹ ನೀಡಲಾಗಿದೆ. ಸಂವಿಧಾನಾತ್ಮಕವಾದ ಎಲ್ಲ ಹಕ್ಕುಗಳನ್ನು ಇವರು ಹೊಂದಿದ್ದು, ಸರಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ನಿಗದಿಪಡಿಸಿದ ಗುರುತಿನ ಚೀಟಿಯನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಸಮಸ್ಯೆಗಳು ಉಂಟಾದಲ್ಲಿ, ಸಮಾಜದಲ್ಲಿ ಯಾರಾದರೂ ಅವಹೇಳನ ಮಾಡಿದ್ದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಕಾನೂನಿನ ಅಡಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾಜ ಸೇವಕ ವಿಶು ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮನಃಶಾಸ್ತ್ರಜ್ಞೆ ಮತ್ತು ಸಮಾಜ ಸೇವಕಿ ಜಯಶ್ರೀ ಭಟ್ ಮಂಗಳೂರು, ನವ ಸಹಜ ಸಮುದಾಯ ಸಂಘಟನೆಯ ಅಧ್ಯಕ್ಷ ನಿಖಿಲ್, ಸಮಾಜ ಹೋರಾಟಗಾರ್ತಿ ವಿ.ಸರೋಜ, ಸಮುದಾಯ ಹೋರಾಟಗಾರ್ತಿ ಸವಿತಾ ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News