ವಸತಿ ಯೋಜನೆ ಕಡತಗಳನ್ನು ಶೀಘ್ರ ವಿಲೇ ಮಾಡಿ: ದಿನಕರ ಬಾಬು
Update: 2020-11-07 20:06 IST
ಉಡುಪಿ, ನ.7: ಸರಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆಗಳ ಆಡಳಿತಾತ್ಮಕ ವಿಷಯಗಳ ಕುರಿತ ಕಡತಗಳನ್ನು ಆದಷ್ಟು ಶೀಘ್ರದಲ್ಲಿ ವಿಲೇವಾರಿಗೊಳಿಸಿ ಪ್ರಗತಿ ಸಾಧಿಸುವಂತೆ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಸೂಚಿಸಿದ್ದಾರೆ.
ಶನಿವಾರ ಉಡುಪಿ ತಾಲೂಕಿನ ಕಡೆಕಾರು ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಸರಕಾರದ ವಿವಿಧ ಯೋಜನೆಗಳಡಿ ಸಾಧಿಸಿದ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಕುರಿತು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗಳ ಜೊತೆ ಚರ್ಚಿಸಿ ಕಾಮಗಾರಿಗಳನ್ನು ಮುತುವರ್ಜಿ ವಹಿಸಿ ಕೂಡಲೇ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಕುತ್ಪಾಡಿ, ಜಿಪಂ ಯೋಜನಾ ನಿರ್ದೇಶಕ ಗುರುದತ್ತ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ಧೇಶ್, ಗಿರೀಶ್ ಶೇಟ್, ಭರಮಾ ಮಾಳಿ ಉಪಸ್ಥಿತರಿದ್ದರು.