ಇಬ್ಬಗೆಯ ನಿಲುವುಗಳೇಕೆ?: ಬಂಧಿತ ಕೇರಳ ಪತ್ರಕರ್ತನ ಪತ್ನಿಯ ಪ್ರಶ್ನೆ

Update: 2020-11-07 15:51 GMT
ಪತ್ರಕರ್ತ ಸಿದ್ದೀಕ್ ಕಪ್ಪನ್

ಹೊಸದಿಲ್ಲಿ,ನ.7: ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಅ.5ರಂದು 19ರ ಹರೆಯದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ವರದಿ ಮಾಡಲು ಹತ್ರಸ್ ಗೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದರು. ಇದಾಗಿ ಒಂದು ತಿಂಗಳೇ ಕಳೆದಿದೆ. ಅವರ ಪತ್ನಿ ರೈಹಾನತ್ ಅವರಿಗೆ ಪತಿಯಿಂದ ಈವರೆಗೆ ಯಾವುದೇ ಸುದ್ದಿಯಿಲ್ಲ.

ಮಥುರಾ ಜೈಲಿನಲ್ಲಿ ಬಂಧನದಲ್ಲಿರುವ ಕಪ್ಪನ್‌ರನ್ನು ಭೇಟಿಯಾಗಲು ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ನ್ಯಾಯಾಲಯವು ಅವಕಾಶ ನೀಡಿಲ್ಲ. ಇದು ಕಪ್ಪನ್ ಕುಟುಂಬವನ್ನು ಇನ್ನಷ್ಟು ಆತಂಕದಲ್ಲಿ ತಳ್ಳಿದೆ. ಇದು ಕಪ್ಪನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಇನ್ನಷ್ಟು ವಿಳಂಬಿಸಿದೆ ಎಂದು ಅವರ ಪರ ವಕೀಲರು ಹೇಳಿದ್ದಾರೆ.

‘ನನ್ನ ಪತಿಯ ಅಪರಾಧವೇನು? ವೀಡಿಯೋ ಕಾಲ್ ಮೂಲಕವಾದರೂ ಸರಿಯೇ, ಅವರನ್ನು ಕನಿಷ್ಠ ಒಂದು ಬಾರಿಯಾದರೂ ನೋಡಲು ನಾನು ಬಯಸಿದ್ದೇನೆ. ಅವರು ಮಧುಮೇಹ ಪೀಡಿತರಾಗಿದ್ದಾರೆ ಮತ್ತು ಅವರ ಈಗಿನ ಆರೋಗ್ಯ ಸ್ಥಿತಿಯ ಬಗ್ಗೆ ನಮ್ಮನ್ನು ಕತ್ತಲಲ್ಲಿರಿಸಲಾಗಿದೆ. ನಾನು ನನ್ನ ಇಚ್ಛಾಶಕ್ತಿ ಮತ್ತು ಧೈರ್ಯವನ್ನು ಕಳೆದುಕೊಳ್ಳುತ್ತಿದ್ದೇನೆ ’ ಎಂದು ರೈಹಾನತ್ ಅಳಲು ತೋಡಿಕೊಂಡರು.

ದಿಲ್ಲಿ ನಿವಾಸಿಯಾಗಿರುವ ಕಪ್ಪನ್ ಕೇರಳ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ಕೆಯುಡಬ್ಲ್ಯುಜೆ)ದ ದಿಲ್ಲಿ ಘಟಕದ ಕಾರ್ಯದರ್ಶಿಯಾಗಿದ್ದು,‘ಅಝಿಮುಖಂ’ ಮಲಯಾಳಂ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಪ್ಪನ್ ಮತ್ತು ಇತರ ಮೂವರನ್ನು ಮಥುರಾದಲ್ಲಿ ಬಂಧಿಸಿರುವ ಪೊಲೀಸರು,ಅವರು ಉತ್ತರ ಪ್ರದೇಶದಲ್ಲಿ ಶಾಂತಿಯನ್ನು ಕದಡಲು ಒಳಸಂಚು ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಎಲ್ಲ ನಾಲ್ವರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಹೇರಲಾಗಿದ್ದು,ಜೊತೆಗೆ ದೇಶದ್ರೋಹ ಆರೋಪಗಳನ್ನೂ ಹೊರಿಸಲಾಗಿದೆ.

ಕಪ್ಪನ್ ಬಂಧನವಾಗಿ ಒಂದು ತಿಂಗಳಾದರೂ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆದಿಲ್ಲ. ಜಾಮೀನು ಅರ್ಜಿಯ ತುರ್ತು ವಿಚಾರಣೆಗಾಗಿ ಆಗ್ರಹಿಸಿ ಕೆಯುಡಬ್ಲುಜೆ ಕಳೆದ ವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು. ಕಪ್ಪನ್ ಪ್ರಕರಣದಲ್ಲಿ ಪತ್ರಿಕಾ ಸ್ವಾತಂತ್ರದ ಉಲ್ಲಂಘನೆ ಮತ್ತು ನ್ಯಾಯದ ನಿರಾಕರಣೆಯ ಬಗ್ಗೆ ಕಳವಳಗಳನ್ನು ಅದು ವ್ಯಕ್ತಪಡಿಸಿತ್ತು.

ಸರ್ವೋಚ್ಚ ನ್ಯಾಯಾಲಯವು ನ.16ರಂದು ಅರ್ಜಿಯ ವಿಚಾರಣೆಯನ್ನು ನಡೆಸಲಿದೆ ಎಂದು ತಿಳಿಸಿದ ಕಪ್ಪನ್ ಪರ ವಕೀಲ ವಿಲ್ಸ್ ಮ್ಯಾಥ್ಯೂಸ್ ಅವರು,ವೀಡಿಯೊ ಕಾನ್ಫರೆನ್ಸಿಂಗ್‌ಗೆ ಅವಕಾಶ ನೀಡಲಾಗಿಲ್ಲ. ಇ-ಜೈಲು ವ್ಯವಸ್ಥೆಯಡಿ ಇ-ಭೇಟಿಗೆ ಮನವಿಯನ್ನೂ ತಿರಸ್ಕರಿಸಲಾಗಿದೆ. ಕಪ್ಪನ್ ತನ್ನ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದಾರೆ. ಅವರ 90ವರ್ಷ ಪ್ರಾಯದ ತಾಯಿ ಅನಾರೋಗ್ಯಪೀಡಿತರಾಗಿ ಹಾಸಿಗೆಗೆ ಅಂಟಿಕೊಂಡಿದ್ದಾರೆ ಎಂದರು.

 ಇತ್ತೀಚಿಗೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿಯವರ ಬಂಧನ ಕುರಿತು ವ್ಯಕ್ತವಾಗಿರುವ ಆಕ್ರೋಶವು ತನ್ನ ಪತಿಯ ಬಂಧನದಲ್ಲೇಕೆ ಕಾಣಿಸಿಕೊಂಡಿಲ್ಲ ಎನ್ನುವುದು ತನಗೆ ತಿಳಿಯುತ್ತಿಲ್ಲ ಎಂದ ರೈಹಾನತ್, ಹಲವಾರು ಜನರು ಗೋಸ್ವಾಮಿ ಬಂಧನವನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದ್ದಾರೆ,ಆದರೆ ತನ್ನ ಪತಿಯ ಬಂಧನದ ಬಗ್ಗೆ ಮೌನವಾಗಿದ್ದಾರೆ ಎಂದು ಬೆಟ್ಟು ಮಾಡಿದರು. ಇಂತಹ ಇಬ್ಬಗೆ ನಿಲುವುಗಳೇಕೆ? ಗೋಸ್ವಾಮಿ ಬಂಧನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು ಕಪ್ಪನ್ ಬಿಡುಗಡೆ ಕೋರಿ ತನ್ನ ಮನವಿಗಳು ಮತ್ತು ಪತ್ರಗಳ ಬಗ್ಗೆ ಮೌನವಾಗಿದ್ದಾರೆ ಎಂದರು.

ಕಪ್ಪನ್ ವಿರುದ್ಧ ಉ.ಪ್ರದೇಶ ಪೊಲೀಸರು ಹೊರಿಸಿರುವ ಒಳಸಂಚು ಮತ್ತು ಭಯೋತ್ಪಾದನೆ ಆರೋಪಗಳನ್ನು ತಳ್ಳಿಹಾಕಿರುವ ರೈಹಾನತ್, ಸಹೋದ್ಯೋಗಿಗಳು ಮತ್ತು ಸ್ನೇಹಿತರು ಅವರು ಅಮಾಯಕರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಕಪ್ಪನ್ ಬಂಧನದ ನಂತರ ಕೆಯುಡಬ್ಲುಜೆ ಅ.6ರಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿತ್ತಾದರೂ ಪ್ರಕರಣವನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ಒಪ್ಪಿಸಿದ್ದ ಸರ್ವೋಚ್ಚ ನ್ಯಾಯಾಲಯವು ಅರ್ಜಿಯಲ್ಲಿ ತಿದ್ದುಪಡಿ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಆದರೆ ಕಪ್ಪನ್ ಜೊತೆಗೆ ಭೇಟಿಗೆ ಅವಕಾಶವನ್ನು ಮಥುರಾ ನ್ಯಾಯಾಲಯವು ನಿರಾಕರಿಸಿದ ಬಳಿಕ ತಾವು ಅರ್ಜಿಯನ್ನು ತಿದ್ದುಪಡಿಗೊಳಿಸಲು ವಿಫಲರಾಗಿದ್ದೆವು ಎಂದು ಮ್ಯಾಥ್ಯೂಸ್ ತಿಳಿಸಿದರು.

ಕೆಯುಡಬ್ಲ್ಯುಜೆ ಪರ ವಕೀಲರು ಅ.16ರಂದು ಕಪ್ಪನ್‌ರನ್ನು ಭೇಟಿಯಾಗಲು ಪ್ರಯತ್ನಿಸಿದ್ದರಾದರೂ ಮಥುರಾ ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿತ್ತು.

ತನ್ನ ಸಹೋದ್ಯೋಗಿಗೆ ನ್ಯಾಯವನ್ನು ಒದಗಿಸಲು ಉ.ಪ್ರ.ಪೊಲೀಸ್ ಮತ್ತು ಸರಕಾರ ವಿಫಲವಾಗಿವೆ ಎಂದು ಹೇಳಿದ ಕೆಯುಡಬ್ಲ್ಯುಜೆ ಮಾಜಿ ಕಾರ್ಯದರ್ಶಿ ಪಿ.ಕೆ.ಮಣಿಕಂಠನ್ ಅವರು, ಕಪ್ಪನ್ ಪಿಎಫ್‌ಐಗೆ ಸೇರಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಕಪ್ಪನ್‌ರನ್ನು ಚೆನ್ನಾಗಿ ತಿಳಿದಿರುವ ಅವರ ಕುಟುಂಬ,ಸ್ನೇಹಿತರು ಮತ್ತು ಜನರು ಅವರು ಪಿಎಫ್‌ಐ ಸದಸ್ಯನಲ್ಲ,ಅವರೋರ್ವ ಪತ್ರಕರ್ತ ಎಂದು ಪ್ರಮಾಣ ಮಾಡಿ ಹೇಳುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News