ಬ್ರಹ್ಮಾವರ: ಕೆಎಎಸ್ ಅಧಿಕಾರಿಗೆ ಸಂಬಂಧಿಸಿದ ಮನೆಗಳಿಗೆ ಎಸಿಬಿ ದಾಳಿ

Update: 2020-11-07 16:10 GMT

ಉಡುಪಿ, ನ.7: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬೆಂಗಳೂರಿನ ಕೆಎಎಸ್ ಅಧಿಕಾರಿ ಸುಧಾ ಅವರಿಗೆ ಸಂಬಂಧಿಸಿದ ಬ್ರಹ್ಮಾವರ ತಾಲೂಕಿನಲ್ಲಿರುವ ಮೂರು ಮನೆಗಳಿಗೂ ಉಡುಪಿ ಹಾಗೂ ಬೆಂಗಳೂರಿನ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಚಾರವಾಗಿ ಸುಧಾ ಅವರಿಗೆ ಸಂಬಂಧಿಸಿದ ಬೆಂಗಳೂರು, ಮೈಸೂರು ಹಾಗೂ ಉಡುಪಿಯಲ್ಲಿರುವ ಮನೆಗಳಿಗೆ ಇಂದು ಬೆಳಗಿನ ಜಾವ 6:30ರ ಸುಮಾರಿಗೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ನಡೆದ ದಾಳಿಯಲ್ಲಿ ಉಡುಪಿ ಎಸಿಬಿ ಡಿವೈಎಸ್ಪಿ ಮಂಜು ನಾಥ್, ಪೊಲೀಸ್ ನಿರೀಕ್ಷಕರಾದ ಸತೀಶ್, ಚಂದ್ರಕಲಾ ಹಾಗೂ ಬೆಂಗಳೂರಿನ ಎಸಿಬಿ ನಿರೀಕ್ಷಕ ಬಾಲಕೃಷ್ಣ ಮತ್ತು ಸಿಬ್ಬಂದಿಗಳು ಹಾಜರಿದ್ದರು.

ಸುಧಾ ಅವರ ಪತಿ ಸ್ಟೋರ್ನಿ ಪಾಯಸ್ ಅವರ ತಂದೆ ಸ್ಟ್ಯಾನಿ ಪಾಯಸ್ ಎಂಬವರಿಗೆ ಸೇರಿದ ಬಾರಕೂರಿನಲ್ಲಿರುವ ಪಾಯಸ್ ಎಂಟರ್‌ಪ್ರೈಸಸ್ ಮತ್ತು ಅವರ ಮನೆಗೆ, ಇವರು ವ್ಯವಹಾರದಲ್ಲಿ ಪಾಲುದಾರರಾಗಿರುವ ಚಾಂತಾರುವಿನ ಲಕ್ಷ್ಮೀ ಬಸ್ ಮಾಲಕ ದೇವದಾಸ್ ಶೆಟ್ಟಿ ಹಾಗೂ ವಿಠಲ ಶೆಟ್ಟಿ ಮತ್ತು ಇವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಹೊಸಾರು ಗ್ರಾಮದ ನವೀನ್ ಡಿಸೋಜ ಎಂಬವರ ಮನೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯನಡೆಸಿದ್ದಾರೆ.

ಸಂಜೆ 7:30ರವರೆಗೂ ಪರಿಶೀಲನಾ ಕಾರ್ಯ ನಡೆದಿದ್ದು, ಈ ವೇಳೆ ದೊರೆತ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಮತ್ತು ಚೆಕ್‌ಬುಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಸುಧಾ ಈ ಹಿಂದೆ ಮಂಗಳೂರು, ಉಡುಪಿಯಲ್ಲೂ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News