ಕಲಾವಿದರು ಮಾಸಾಶನ, ವೈದ್ಯಕೀಯ ಸೌಲಭ್ಯ ಬಳಸಿಕೊಳ್ಳಿ: ಎಂ.ಎ. ಹೆಗಡೆ

Update: 2020-11-07 16:17 GMT

ಕೊಲ್ಲೂರು, ನ. 7: ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದರಿಗೆ ಸರಕಾರದ ವತಿಯಿಂದ ವೈದ್ಯಕೀಯ ಸೌಲಭ್ಯ ಹಾಗೂ 58ವರ್ಷ ದಾಟಿದ ಹಿರಿಯ ಕಲಾವಿದರಿಗೆ ಮಾಸಾಶನ ಸೌಲಭ್ಯವು ದೊರೆಯು ತಿದ್ದು, ಇದರ ಪ್ರಯೋಜನವನ್ನು ನಮ್ಮ ಕಲಾವಿದರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದ್ದಾರೆ.

ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಶ್ರೀಮೂಕಾಂಬಿಕಾ ಸಭಾಭವನ ದಲ್ಲಿ ಇಂದು ಸಂಜೆ ಅಕಾಡೆಮಿ ವತಿಯಿಂದ ಆಯೋಜಿಸಲಾದ 2019ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸರಕಾರದಿಂದ ಅಕಾಡೆಮಿಗೆ ಸಿಗುವ ವಾರ್ಷಿಕ ಅನುದಾನ ಈಗ 70 ಲಕ್ಷ ರೂ.ಗಳಿಗೆ ಇಳಿದಿದೆ. ಆದರೂ ಅಕಾಡೆಮಿ ಯಕ್ಷಗಾನ ಕಲೆ ಹಾಗೂ ಕಲಾವಿದರ ಅಭಿವೃದ್ಧಿಗೆ ತನ್ನ ಕೈಲಾದ ಸಹಾಯ ಮಾಡುತ್ತಿದೆ. ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ವೈದ್ಯಕೀಯ ವೆಚ್ಚ ಸರಕಾರದಿಂದ ಭರಿಸುವ ಅವಕಾಶವಿದೆ. ಅದೇ ರೀತಿ ಹಿರಿಯ ಕಲಾವಿದರಿಗೆ ಮಾಸಿಕ 2000ರೂ.ಗಳ ಮಾಸಾಶನವೂ ದೊರೆಯುತ್ತಿದೆ. ಕೊರೋನದ ಈ ಸಮಯದಲ್ಲಿ ಇದು ನಿಮಗೆ ಸಹಾಯವಾಗುತ್ತದೆ. ಇದಕ್ಕಾಗಿ ಅರ್ಜಿಯನ್ನು ಹಾಕಿಕೊಳ್ಳಿ ಎಂದವರು ಸಲಹೆ ನೀಡಿದರು.

ಹಿರಿಯ ಕಲಾವಿದರಾದ ಮುದ್ರಾಡಿ ಕೇಶವ ಶೆಟ್ಟಿಗಾರ್ (ಅಂಬಾತನಯ ಮುದ್ರಾಡಿ) ಇವರಿಗೆ ಪ್ರತಿಷ್ಠಿತ ಪಾರ್ತಿಸುಬ್ಹ ಪ್ರಶಸ್ತಿಯೊಂದಿಗೆ ಒಂದು ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಅದೇ ರೀತಿ ಡಾ.ರಾಮಕೃಷ್ಣ ಗುಂದಿ ಅವರಿಗೆ 2019ನೇ ಸಾಲಿನ ಗೌರವ ಪ್ರಶಸ್ತಿ, ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈ, ಮಹಮ್ಮದ್ ಗೌಸ್, ಎಂ.ಎನ್.ಹೆಗಡೆ ಹಳವಳ್ಳಿ, ಹಾರಾಡಿ ಸರ್ವೋತ್ತಮ ಗಾಣಿ, ಮೂರೂರು ರಾಮಚಂದ್ರ ಹೆಗಡೆ ಇವರಿಗೆ 2019ನೇ ಸಾಲಿನ ಯಕ್ಷಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಿರುಪರಿಚಯದ ಪುಸ್ತಕ ಬಿಡುಗಡೆಗೊಳಿಸಿ, ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅತಿಥಿಗಳಾಗಿ ದೇವಸ್ಥಾನದ ಧರ್ಮದರ್ಶಿ ಡಾ.ಅತುಲ ಕುಮಾರ್ ಶೆಟ್ಟಿ, ಅರ್ಚಕ ನರಸಿಂಹ ಭಟ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಪೂರ್ಣಿಮಾ ಉಪಸ್ಥಿತರಿದ್ದರು.

ಅಕಾಡಮಿಯ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಅಕಾಡೆಮಿಯ ಸದಸ್ಯ ಸಂಚಾಲಕ ಕೆ.ಎಂ.ಶೇಖರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಹಟ್ಟಿಯಂಗಡಿ ಯಕ್ಷಗಾನ ಮಂಡಳಿಯಿಂದ ಭೀಷ್ಮವಿಜಯ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News