×
Ad

‘ಟಿವಿ ಟುಡೇ’ ಗೆ 5 ಲಕ್ಷ ರೂ.ದಂಡ ವಿಧಿಸುವ ಬಿಎಆರ್‌ಸಿ ಆದೇಶ ತಳ್ಳಿಹಾಕಿದ ಬಾಂಬೆ ಹೈಕೋರ್ಟ್

Update: 2020-11-07 22:14 IST

ಹೊಸದಿಲ್ಲಿ,ಅ.7: ಟಿಆರ್‌ಪಿಗಾಗಿ ವೀಕ್ಷಕಬಳಗದ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲು ಅಕ್ರಮವೆಸಗಿದ ಹಾಗೂ ತಾನು ನಿಗದಿ ಪಡಿಸಿದ ನೀತಿಸಂಹಿತೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಟಿವಿ ಟುಡೇ ನೆಟ್‌ವರ್ಕ್ ಸಂಸ್ಥೆಗೆ 5 ಲಕ್ಷ ರೂ. ದಂಡ ವಿಧಿಸಿದ್ದ ಟಿವಿ ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(ಬಿಎಆರ್‌ಸಿ)ನ ಆದೇಶ ವನ್ನು ಬಾಂಬೆ ಹೈಕೋರ್ಟ್ ತಳ್ಳಿಹಾಕಿದೆ.

 ಸುದ್ದಿವಾಹಿನಿ ಇಂಡಿಯಾ ಟುಡೇಯ ಮಾಲಕ ಸಂಸ್ಥೆಯಾದ ‘ಟಿವಿ ಟುಡೇ’ಗೆ ಬಿಎ ಆರ್‌ಸಿ ಜುಲೈ 31ರಂದು ದಂಡವಿಧಿಸಿತ್ತು.

 ಟಿವಿ ಟುಡೇ ನೆಟ್‌ವರ್ಕ್  ಒಡೆತನದ ಚಾನೆಲ್‌ನಲ್ಲಿ ದೈನಂದಿನ ಸರಾಸರಿ ವೀಕ್ಷಣೆಯ ಪ್ರಮಾಣದಲ್ಲಿ ಗಣನೀಯವಾದ ‘ಅಸಾಮಾನ್ಯ ಜಿಗಿತ’ ಕಂಡುಬಂದಿತ್ತೆಂದು ಬಿಎಆರ್‌ಸಿ ಆಪಾದಿಸಿತ್ತು. ಟಿಆರ್‌ಪಿ ರೇಟಿಂಗ್ಸ್ ಯಂತ್ರಗಳನ್ನು ಅಳವಡಿಸಲಾದ ಮನೆಗಳ ಸದಸ್ಯರ ಮೇಲೆ ಪ್ರಭಾವ ಬೀರಿ, ಅಕ್ರಮವಾಗಿ ಟಿಆರ್‌ಪಿ ರೇಟಿಂಗ್ಸ್ ಹೆಚ್ಚಿಸಲಾಗಿದೆಯೆಂದು ಬಿಎಆರ್‌ಸಿ ಶಂಕಿಸಿದೆ.

   ತನ್ನ ವಿರುದ್ಧ ಬಿಎಆರ್‌ಸಿ ಯಾವುದೇ ದಂಡನಾತ್ಮಕ ಕ್ರಮವನ್ನು ಕೈಗೊಳ್ಳಬಾರದೆಂದು ಟಿವಿ ಟುಡೇ ನೆಟ್‌ವರ್ಕ್ ಬಯಸಿದ್ದಲ್ಲಿ, ಅದು ದಂಡದ ಮೊತ್ತವನ್ನು ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಜಮೆ ಮಾಡುವಂತೆ ಬಾಂಬೆ ಹೈಕೋರ್ಟ್ ಕಳೆದ ತಿಂಗಳು ಆದೇಶಿಸಿತ್ತು. ತನ್ನ ವಿರುದ್ಧ ಬಿಎಆರ್‌ಸಿ ಶಿಸ್ತುಕ್ರಮ ಕೈಗೊಂಡಿರುವುದನ್ನು ಟಿವಿ ಟುಡೇ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

   ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನಿತಿನ್ ಜಮದಾರ್ ಹಾಗೂ ಮಿಲಿಂದ್ ಜಾಧವ್ ಅವರನ್ನೊಳಗೊಂಡ ನ್ಯಾಯಪೀಠವು,ಟಿವಿ ಟುಡೇ ನೆಟ್‌ವರ್ಕ್ ವಿರುದ್ಧ 5 ಲಕ್ಷ ರೂ. ದಂಡವಿಧಿಸುವ ಬಿಎಆರ್‌ಸಿಯ ಜುಲೈ 31ರ ಆದೇಶವನ್ನು ತಳ್ಳಿಹಾಕಿದೆ. ಟಿವಿ ಟುಡೇಯ ಅಹವಾಲನ್ನು ಅಲಿಸಲು ತಾನು ಸಿದ್ದನಿರುವುದಾಗಿ ಬಿಎಆರ್‌ಸಿ ನ್ಯಾಯಾಲಯಕ್ಕೆ ತಿಳಿಸಿತು. ಟಿವಿ ಟುಡೇ ಕೂಡಾ ತಾನು ಬಿಎಆರ್‌ಸಿ ಮುಂದೆ ಹಾಜರಾಗುವ ಇಚ್ಛೆಯನ್ನು ವ್ಯಕ್ತಪಡಿಸಿತು.

  ಬಿಎಆರ್‌ಸಿಯು ದಂಡವನ್ನು ವಿಧಿಸುವ ಮುನ್ನ ಅದು ಸಮರ್ಪಕವಾದ ಕೋರಂ ಸಭೆಯನ್ನು ನಡೆಸಿರಲಿಲ್ಲವೆಂದು ಟಿವಿ ಟುಡೇ ಪರ ನ್ಯಾಯವಾದಿಗಳಾದ ಅಭಿನವ್ ಚಂದ್ರಚೂಡ್, ಮುನಾಫ್ ವಿರ್ಜಿ ಹಾಗೂ ಆಕಾಶ್ ಆಗರ್ವಾಲ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News