×
Ad

ಹಂಪನಕಟ್ಟೆ-ಬಾವುಟಗುಡ್ಡೆ ರಸ್ತೆ ಕಾಮಗಾರಿ: ವಾಹನ ಸಂಚಾರ ಮಾರ್ಪಾಡು

Update: 2020-11-07 22:43 IST

ಮಂಗಳೂರು, ನ.7: ಸ್ಮಾರ್ಟ್‌ಸಿಟಿ ಯೋಜನೆಯಡಿ ಹಂಪನಕಟ್ಟೆ-ಬಾವುಟಗುಡ್ಡೆ ಕಡೆಗೆ ಹಾದು ಹೋಗುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಹಾಗೂ ಒಳಚರಂಡಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.8ರಿಂದ ಜ.6ರ ತನಕ 60 ದಿನಗಳ ಕಾಲ ವಾಹನ ಸಂಚಾರ ಮಾರ್ಪಾಡು ಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಹಂಪನಕಟ್ಟೆ ಕಡೆಯಿಂದ ನವಭಾರತ್ ವೃತ್ತದ ಕಡೆಗೆ ಏಕಮುಖ ವಾಹನ ಸಂಚಾರವನ್ನಾಗಿ ಘೋಷಿಸಲಾಗಿದೆ. ನವಭಾರತ್ ವೃತ್ತದಿಂದ ಹಂಪನಕಟ್ಟೆ ಕಡೆಗೆ ಪ್ರವೇಶಿಸುವ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಹಂಪನಕಟ್ಟೆ ಕಡೆಯಿಂದ ಬಾವುಟಗುಡ್ಡ ಹಾಗು ಫಳ್ನೀರ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಕೆ.ಎಸ್.ರಾವ್ ರಸ್ತೆ ಮೂಲಕ, ಪಿವಿಎಸ್ ಕಡೆಗೆ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ಮುಂದುವರಿಯಬೇಕು.

ಡಾ.ಅಂಬೇಡ್ಕರ್ ವೃತ್ತದ ಕಡೆಯಿಂದ ಹಂಪನಕಟ್ಟೆ ಕಡೆಗೆ ಬರುವ ವಾಹನಗಳು ಬಲ್ಮಠ ರಸ್ತೆಯಲ್ಲಿರುವ ಅರವಿಂದ ಮೋಟಾರ್ಸ್ ಶೋ ರೂಂ ಎದುರಿನ ಮಿಲಾಗ್ರಿಸ್ ಕ್ರಾಸ್ ರಸ್ತೆ ಮೂಲಕ ಪಳ್ನೀರ್ ರಸ್ತೆಗೆ ಪ್ರವೇಶಿಸಿ ವೆನ್ಲಾಕ್ ಆಸ್ಪತ್ರೆಯ ಅಂಡರ್‌ಪಾಸ್ ರಸ್ತೆಯ ಮೂಲಕ ರೈಲ್ವೇ ಸ್ಟೇಷನ್ ರಸ್ತೆ ಮೂಲಕ ತಾಲೂಕು ಪಂಚಾಯಿತಿ ಕಚೇರಿ ಬಳಿಯ ಯು.ಪಿ. ಮಲ್ಯ ರಸ್ತೆಯ ಮೂಲಕ ಎ.ಬಿ.ಶೆಟ್ಟಿ ಸರ್ಕಲ್‌ಗೆ ಬಂದು ಮುಂದುವರಿಯುವುದು.

ಮಿಲಾಗ್ರಿಸ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ರೈಲ್ವೇ ಸ್ಟೇಷನ್‌ನಿಂದ ವೆನ್ಲಾಕ್ ಆಸ್ಪತ್ರೆಯ ಅಂಡರ್ ‌ಪಾಸ್ ರಸ್ತೆ ಮೂಲಕ ಹಂಪನಕಟ್ಟೆ ಕಡೆಗೆ ಪ್ರವೇಶಿಸುವ ಎಲ್ಲ ವಾಹನಗಳ ಸಂಚಾರ ನಿಷೇಧಿಸಿದೆ. ಈ ರಸ್ತೆಗಳಲ್ಲಿ ಅವಶ್ಯವುಳ್ಳ ಸೂಕ್ತ ಸೂಚನಾ ಫಲಕಗಳನ್ನು ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಅಳವಡಿಸುವುದು. ಸುಗಮ ಸಂಚಾರ ನಿಯಂತ್ರಣಕ್ಕೆ ಸೂಕ್ತ ಸಿಬ್ಬಂದಿ ನಿಯೋಜಿಸಿ ಆದೇಶ ಪಾಲಿಸಲು ಸಂಚಾರ ಎಸಿಪಿ ಅವರಿಗೆ ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News