×
Ad

ವಿದ್ಯಾರ್ಥಿವೇತನ ಸದುಪಯೋಗವಾಗಲಿ: ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

Update: 2020-11-07 22:56 IST

ಮಂಗಳೂರು, ನ.7: ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ನೀಡುವ ವಿದಾರ್ಥಿ ವೇತನ ಸದುಪಯೋಗ ಪಡೆದು ಭವಿಷ್ಯದಲ್ಲಿ ಸಮಾಜದ ಋಣ ತೀರಿಸುವ ಮನೋಭಾವನೆ ಬೆಳೆಸಿಕೊಳ್ಳ ಬೇಕು ಎಂದು ಮಂಗಳೂರಿನ ಬಿಷಪ್ ಅತಿ ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದ್ದಾರೆ.

ನಗರದ ಕೆಥೋಲಿಕ್ ಸೆಂಟರ್‌ನ ಸೊಡ್ಯಾಲಿಟಿ ಆ್ ದಿ ಇಮ್ಯಾಕ್ಯುಲೆಟ್ ಕನ್ಸೆಪ್ಶನ್ ಆ್ ದಿ ಬ್ಲೆಸ್‌ಡ್ ವರ್ಜಿನ್ ಮೇರಿ ಸೇವಾ ಸಂಸ್ಥೆಯಿಂದ ನೀಡಲಾಗುವ ವಾರ್ಷಿಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.

ಕೊಡಿಯಾಲ್‌ಬೈಲಿನ ಬಿಷಪ್ಸ್ ಹೌಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 240 ವಿದ್ಯಾರ್ಥಿಗಳಿಗೆ ಎಂಟು ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಂಸ್ಥೆಯ ವತಿಯಿಂದ ಈಗಾಗಲೇ ಎಂಟು ಲಕ್ಷ ರೂ. ವೈದ್ಯಕೀಯ ನೆರವನ್ನು ಅರ್ಹ ಲಾನುಭವಿಗಳಿಗೆ ವಿತರಿಸಲಾಗಿದೆ.

ವಿದ್ಯಾರ್ಥಿ ವೇತನವು ಸಾಲ ಅಲ್ಲ. ಅದು ಪ್ರೀತಿಯ ಕಾಣಿಕೆ. ಇದನ್ನು ಕೃತಜ್ಞತಾ ಮನೋಭಾವದಿಂದ ಸ್ವೀಕರಿಸಿ ಹೃದಯ ವೈಶಾಲ್ಯವನ್ನು ಮೆರೆಯ ಬೇಕು. ನಿಸ್ವಾರ್ಥ ಜೀವನ ನಮ್ಮದಾಗ ಬೇಕು ಎಂದು ಹೇಳಿದ ಬಿಷಪ್ ಅವರು ವಿದ್ಯಾರ್ಥಿಗಳಿಗೆ ಮತ್ತು ಸೇವಾ ಸಂಸ್ಥೆಗೆ ಶುಭ ಹಾರೈಸಿದರು.

ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ. ಮೆಲ್ವಿನ್ ಪಿಂಟೊ ಅವರು ವಿದ್ಯಾರ್ಥಿಗಳು ನಿಗದಿತ ಗುರಿಯನ್ನು ಹೊಂದಿ, ಅದನ್ನು ಈಡೇರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಕರೆ ನೀಡಿದರು.

ವರ್ಜಿನ್ ಮೇರಿಯ ಪರಿಶುದ್ಧ ಪರಿಕಲ್ಪನೆಯ ಸೊಡ್ಯಾಲಿಟಿಗೆ 150 ವರ್ಷಗಳ ಇತಿಹಾಸವಿದೆ. 1870ರಲ್ಲಿ ಜರ್ಮನ್ ಮಿಶನರಿಗಳು ಇದನ್ನು ಸ್ಥಾಪಿಸಿದ್ದರು. ಸಮಾಜದ ಆರ್ಥಿಕ ಹಿಂದುಳಿದವರಿಗೆ ಸಹಾಯ ಮತ್ತು ಸೇವೆ ಒದಗಿಸುವುದು ಇದರ ಉದ್ದೇಶ. ಈ ದಿಶೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ಮತ್ತು ವೈದ್ಯಕೀಯ ನೆರವು ರೂಪದಲ್ಲಿ 25 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ನೀಡುತ್ತದೆ. ಬಿಷಪ್ ಅವರು ಇದರ ಪೋಷಕರಾಗಿದ್ದಾರೆ ಎಂದು ಪ್ರೊ.ಜಾನ್ ಡಿಸಿಲ್ವಾ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವೀವಿಯನ್ ಸಿಕ್ವೇರಾ ಸ್ವಾಗತಿಸಿ, ಕೋಶಾಧಿಕಾರಿ ಸುಶಿಲ್ ನೊರೋನ್ಹಾ ವಂದಿಸಿದರು. ಉಪಾಧ್ಯಕ್ಷ ಬೆನೆಡಿಕ್ಟ್ ಮಿನೇಜಸ್ ವೇದಿಕೆಯಲ್ಲಿದ್ದರು. ಶೈಕ್ಷಣಿಕ ಘಟಕದ ಸಂಚಾಲಕ ಪ್ರೊ.ಜಾನ್ ಡಿಸಿಲ್ವ ಪ್ರಸ್ತಾವನೆಗೈದು, ಕಾರ್ಯಕ್ರಮ ನಿರ್ವಹಿಸಿದರು. ಮಾಧ್ಯಮ ಸಲಹೆಗಾರ ಇ. ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News