×
Ad

ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ಭಾರತೀಯ ರಾಜತಾಂತ್ರಿಕೆ ಆಯ್ಕೆ

Update: 2020-11-07 23:23 IST
ಫೋಟೊ ಕೃಪೆ: Twitter

ವಿಶ್ವಸಂಸ್ಥೆ (ನ್ಯೂಯಾರ್ಕ್), ನ. 7: ವಿಶ್ವಸಂಸ್ಥೆಯ ಮಹಾಧಿವೇಶನದ ಉಪ ಸಂಸ್ಥೆಯಾಗಿರುವ ‘ಆಡಳಿತಾತ್ಮಕ ಮತ್ತು ಬಜೆಟರಿ ವಿಷಯಗಳ ಸಲಹಾ ಸಮಿತಿ’ (ಎಸಿಎಬಿಕ್ಯೂ)ಗೆ ವಿಶ್ವಸಂಸ್ಥೆಯಲ್ಲಿ ಭಾರತದ ರಾಜತಾಂತ್ರಿಕೆಯಾಗಿರುವ ವಿದಿಶಾ ಮೈತ್ರಾ ಆಯ್ಕೆಯಾಗಿದ್ದಾರೆ.

ವಿಶ್ವಸಂಸ್ಥೆಯಲ್ಲಿರುವ ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿಯಾಗಿರುವ ಮೈತ್ರಾ, ಏಶ್ಯ-ಪೆಸಿಫಿಕ್ ದೇಶಗಳ ಗುಂಪಿನಲ್ಲಿ 126 ಮತಗಳನ್ನು ಪಡೆದಿದ್ದಾರೆ.

193 ಸದಸ್ಯ ಬಲದ ವಿಶ್ವಸಂಸ್ಥೆ ಮಹಾಧಿವೇಶನವು, ಸಲಹಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುತ್ತದೆ. ವಿಸ್ತೃತ ಭೌಗೋಳಿಕ ಪ್ರಾತಿನಿಧ್ಯ, ವೈಯಕ್ತಿಕ ಅರ್ಹತೆ ಮತ್ತು ಅನುಭವದ ಆಧಾರದಲ್ಲಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

 ಏಶ್ಯ-ಪೆಸಿಫಿಕ್ ದೇಶಗಳ ಗುಂಪಿನಿಂದ ಮೈತ್ರಾ ಸೇರಿದಂತೆ ಇಬ್ಬರು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ಈ ಗುಂಪಿನ ಇನ್ನೋರ್ವ ಅಭ್ಯರ್ಥಿ ಇರಾಕ್‌ನ ಅಲಿ ಮುಹಮ್ಮದ್ ಫಯೀಕ್ ಅಲ್-ದಬಾಗ್ 64 ಮತಗಳನ್ನು ಪಡೆದರು.

ಮಹಾಧಿವೇಶನದ ಐದನೇ ಸಮಿತಿಯು ಮೈತ್ರಾರ ಹೆಸರನ್ನು ಸಲಹಾ ಸಮಿತಿಗೆ ಶಿಫಾರಸು ಮಾಡಿತ್ತು. ಅವರ ಅಧಿಕಾರಾವಧಿಯು 2021 ಜನವರಿ 1ರಂದು ಆರಂಭಗೊಂಡು ಮೂರು ವರ್ಷಗಳವರೆಗೆ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News