ಜಿಲ್ ಬೈಡನ್ : ಪ್ರೊಫೆಸರ್ ಹುದ್ದೆಯಿಂದ ಅಮೆರಿಕದ ಪ್ರಥಮ ಮಹಿಳೆಯಾಗಿ...

Update: 2020-11-08 04:02 GMT

ವಾಷಿಂಗ್ಟನ್, ನ.8: ರಾಜಕೀಯ ವಲಯದ ಪ್ರಭಾವಳಿಗೆ ಜಿಲ್ ಬೈಡನ್ ಹೊಸಬರೇನೂ ಅಲ್ಲ. 1977ರಿಂದಲೂ ಶ್ವೇತಭವನದಲ್ಲಿ ಒಳಗಿನವರಾಗಿಯೇ ಇದ್ದ ಪತಿಯ ಜತೆಗೆ ಎಂಟು ವರ್ಷಗಳ ಕಾಲ ಅಮೆರಿಕದ ದ್ವಿತೀಯ ಮಹಿಳೆಯಾಗಿ ಕಾರ್ಯನಿರ್ವಹಿಸಿದ್ದರು.

 ಆದರೆ ಇದೀಗ ಜೋ ಬೈಡನ್ ಶ್ವೇತಭವನದ ಅಧಿಪತ್ಯ ಹಿಡಿಯುತ್ತಿದ್ದಂತೆಯೇ 69 ವರ್ಷದ ಪತ್ನಿ, ಪ್ರೊಫೆಸರ್ ಹುದ್ದೆಯನ್ನು ಉಳಿಸಿಕೊಂಡೇ 21ನೇ ಶತಮಾನದಲ್ಲಿ ಅಮೆರಿಕದ ಪ್ರಥಮ ಮಹಿಳೆಯಾಗಿ ಕಾರ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.

"ಬಹುತೇಕ ಅಮೆರಿಕನ್ ಮಹಿಳೆಯರಿಗೆ ವೈಯಕ್ತಿಕ ಜೀವನ ಮತ್ತು ಕುಟುಂಬ ಜೀವನ ಇರುತ್ತದೆ. ಆದರೆ ಪ್ರಥಮ ಮಹಿಳೆಯರಿಗೆ ಮಾತ್ರ ಅದಕ್ಕೆ ಅವಕಾಶವಿಲ್ಲ" ಎಂದು ಓಹಿಯೊ ವಿವಿಯಲ್ಲಿ ಇತಿಹಾಸ ಪ್ರೊಫೆಸರ್ ಆಗಿರುವ ಕ್ಯಾಥರಿನ್ ಜೆಲ್ಲಿಸನ್ ಹೇಳುತ್ತಾರೆ. ಜಿಲ್ ಹಲವು ವರ್ಷಗಳಿಂದ 77 ವರ್ಷದ ಪತಿಗೆ ವಿಶ್ವಾಸಾರ್ಹ ಸಲಹೆಗಾರ್ತಿ ಎನಿಸಿಕೊಂಡವರು.

ಪ್ರಥಮ ಮಹಿಳೆಯಾಗಿ ಅವರು, ಶಿಕ್ಷಣ ಸಮಸ್ಯೆಗಳ ವಿಚಾರದಲ್ಲಿ ಮತ್ತು ಸೇನಾಪಡೆಗೆ ಸೇರ್ಪಡೆ ವಿಷಯದಲ್ಲಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ. 2011ರಲ್ಲಿ ಅವರು ಮಿಚೆಲ್ ಒಬಾಮಾ ಜತೆಗೆ ಮಿಲಿಟರಿ ಕುಟುಂಬಗಳ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡವರು. ಆದಾಗ್ಯೂ ಪ್ರೊಫೆಸರ್ ಆಗಿ, ತಾಯಿಯಾಗಿ, ಅಜ್ಜಿಯಾಗಿ, ಆಘಾತಕ್ಕೊಳಗಾದ ಬೈಡನ್ ಕುಟುಂಬದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸುತ್ತಾ ಬಂದಿದ್ದರು.

1972ರಲ್ಲಿ ಜೋ ಅವರ ಪತ್ನಿ ಹಾಗೂ ಪುತ್ರಿ ಕಾರು ಅಪಘಾತದಲ್ಲಿ ಮೃತಪಟ್ಟಾಗ, ಅಪಘಾತದಲ್ಲಿ ಗಾಯಗೊಂಡ ಇಬ್ಬರು ಪುಟ್ಟ ಗಂಡುಮಕ್ಕಳನ್ನು ಬೆಳೆಸುವ ಹೊಣೆ ಜೋ ಹೆಗಲ ಮೇಲೆ ಬಿದ್ದಿತ್ತು. ಈ ಹಂತದಲ್ಲಿ ಜಿಲ್ ಜಾಕೋಬ್, ಬೈಡನ್ ಕುಟುಂಬ ಪ್ರವೇಶಿಸಿದರು. 1951ರಲ್ಲಿ ಫಿಲಿಡೆಲ್ಫಿಯಾದಲ್ಲಿ ಜನಿಸಿದ ಜಿಲ್ ಅವರ ತಂದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದವರು. ತಾಯಿ ಗೃಹಿಣಿ. ಪತ್ನಿಯನ್ನು ಕಳೆದುಕೊಂಡು, ಅಮೆರಿಕದ ಸೆನೆಟ್ ಸದಸ್ಯರಾಗಿ ಪ್ರತಿ ದಿನ ದೆಲವೇರ್‌ನಿಂದ ವಾಷಿಂಗ್ಟನ್‌ಗೆ ಪ್ರಯಾಣಿಸುತ್ತಿದ್ದ ಬೈಡನ್ ಅವರ ಸಂಪರ್ಕವಾದಾಗ ಜಿಲ್ ತಮ್ಮ ಮೊದಲ ಪತಿಗೆ ವಿಚ್ಛೇದನ ನೀಡುವ ಪ್ರಕ್ರಿಯೆಯಲ್ಲಿದ್ದರು.

1977ರಲ್ಲಿ ಸತಿ- ಪತಿಗಳಾದ ಜಿಲ್- ಜೋ ಜೋಡಿ, ಹಂಟರ್ ಮತ್ತು ಬಿಯಾವ್ ಅವರಿಗೆ 'ತಾಯಿ'ಯಾದರು. 1981ರಲ್ಲಿ ಈ ದಂಪತಿಗೆ ಆಶ್ಲೆ ಹೆಸರಿನ ಪುತ್ರಿ ಹುಟ್ಟಿದಳು. ಕುಟುಂಬದ ಜವಾಬ್ದಾರಿಯ ನಡಯವೆ ಬೈಡನ್ ಎರಡು ಸ್ನಾತಕೋತ್ತರ ಪದವಿ ಪಡೆದರು. ಕ್ರಮೇಣ ಶಿಕ್ಷಣ ಮುಂದುವರಿಸಿದ ಜಿಲ್ ಶಿಕ್ಷಣ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಇದೀಗ ಉತ್ತರ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಬೋಧಿಸುತ್ತಿದ್ದಾರೆ.

ಹಲವು ಏಳು ಬೀಳುಗಳನ್ನು ಕಂಡ ಕುಟುಂಬ ಜೀವನದಲ್ಲಿ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಬೈಡನ್ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಎಂಟು ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದಾಗ, ಬಿಯಾವ್ ಕ್ಯಾನ್ಸರ್‌ಗೆ ಬಲಿಯಾದಾಗ, ಇದೀಗ ಯಶಸ್ವಿಯಾಗಿ ಶ್ವೇತಭವನದ ಚುಕ್ಕಾಣಿ ಹಿಡಿದಾಗಲೂ ಜತೆಯಾಗಿಯೇ ಇದ್ದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News