ಮೂಡುಬಿದಿರೆ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್ ನಿಧನ

Update: 2020-11-08 13:59 GMT

ಮೂಡುಬಿದಿರೆ : ಇಲ್ಲಿನ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್ (82) ರವಿವಾರ ಮಂಗಳೂರಿನ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಸಹಿತ ಬಂಧುವರ್ಗವನ್ನು ಅಗಲಿದ್ದಾರೆ.

1967ರಿಂದ 1971ರ ಅವಧಿಗೆ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಗೆದ್ದ ಅವರು ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಎರಡನೇ ಶಾಸಕರೆನಿಸಿದ್ದರು. 1971ರಲ್ಲಿ  ಸುರತ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರೂ ಅವರು ಪರಾಜಿತರಾದರು. ಜನಪ್ರತಿನಿಧಿಯಾಗಿ ಭೂಮಸೂದೆಯ ವಿರುದ್ಧ ಸದಾ ದನಿಯೆತ್ತಿದ್ದ ಅವರು ಪ್ರತ್ಯೇಕ ತುಳು ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ ಮೊದಲ ಶಾಸಕರಾಗಿ ಗುರುತಿಸಿಕೊಂಡಿದ್ದರು. 

ಬೈಕ್‍ಗಳೇ ಅಪರೂಪವೆನಿಸಿದ್ದ ಎಪ್ಪತ್ತರ ದಶಕದಲ್ಲಿ ತಮ್ಮ ಜಾವಾ ಬೈಕ್‍ನಲ್ಲಿಯೇ ಬೆಂಗಳೂರು,ಮದ್ರಾಸ್, ತಿರುಪತಿ, ಕೊಚ್ಚಿ ಹೀಗೆ ದೂರದ ರಾಜ್ಯಗಳಿಗೂ ಬೈಕ್‍ನಲ್ಲೇ ಸುತ್ತಾಡಿ ಅವರು ಗಮನ ಸೆಳೆದಿದ್ದರು. 1968ರಲ್ಲಿ ಮೈಸೂರಿನಲ್ಲಿ ಆನೆಗಳನ್ನು ಸೆರೆಹಿಡಿಯುವ ಖೆಡ್ಡಾದ ಕಾರ್ಯಾ ಚರಣೆ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಫೈರಿಂಗ್‍ನಿಂದಾಗಿ ಅವರ ಎಡಕಣ್ಣಿಗೆ ಗಂಭೀರವಾಗಿ ಹಾನಿಯಾಗಿತ್ತು. ಎಂಭತ್ತದ ದಶಕದಲ್ಲಿ ರಾಜ್ಯದ ಗಮನ ಸೆಳೆದಿದ್ದ ಮೂಡುಬಿದಿರೆಯ ಅಂಕಸಾಲೆ ಚಾಮುಂಡಿಬೆಟ್ಟದ ದೇವಿ ಆರಾಧನಾ ಸ್ಥಳ ವಿವಾದದಲ್ಲಿ ಪರವಾಗಿದ್ದ ಬಣದಲ್ಲಿ ಕಟ್ಟೆಮಾರ್ ಗುರುತಿಸಿಕೊಂಡಿದ್ದರು. ಭೂಸೇನೆಯ ಸ್ಥಾಪಕ ಕಾರ್ಯದರ್ಶಿ, ರೈತವಾರೀ ಭೂಮಾಲೀಕರ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಅವರು ಜಯ ಪ್ರಕಾಶ್ ನಾರಾಯಣರ ಚಳುವಳಿಯಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದರು. 1986ರ ಬಳಿಕ  ಆಧ್ಯಾತ್ಮಿಕವಾಗಿ ತೊಡಗಿ ಕೊಂಡು  ಮಂಗಳೂರಿನ ತಮ್ಮ ನಿವಾಸದಲ್ಲಿ ದೇವಿ ಧರ್ಮದೂತರೆಸಿಕೊಂಡು ಕಾರ್ಯನಿರತರಾಗಿದ್ದರು. ಕಟ್ಟೆಮಾರ್ ಅವರ ನಿಧನಕ್ಕೆ ಮೂಡುಬಿದಿರೆ ಜೈನಮಠದ ಭಟ್ಟಾರಕ ಶ್ರೀಗಳವರು ಸಂತಾಪ ವ್ಯಕ್ತಪಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News