ಕಂಪ್ಯೂಟರ್ ಬಾಬಾ ಬಂಧನ: ಆಶ್ರಮದ ಬಳಿಯ ಕಟ್ಟಡ ನೆಲಸಮ

Update: 2020-11-08 14:58 GMT

ಭೋಪಾಲ, ನ.9: ‘ಕಂಪ್ಯೂಟರ್ ಬಾಬಾ’ ಎಂದೇ ಕರೆಸಿಕೊಳ್ಳುವ ಸ್ವಘೋಷಿತ ದೇವಮಾನವ ನಾಮದೇವ್ ತ್ಯಾಗಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಹೊಂದಿರುವ ಆಶ್ರಮದ ಬಳಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ಅಧಿಕಾರಿಗಳು ರವಿವಾರ ನೆಲಸಮ ಮಾಡಿದ್ದು ಇದಕ್ಕೂ ಮುನ್ನ ತ್ಯಾಗಿ ಹಾಗೂ ಆತನ 6 ಸಹಚರರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇಂದೋರ್‌ನ ಹೊರವಲಯದ ಜಂಬೂರ್ಡಿ ಹಾಪ್ಸಿ ಗ್ರಾಮದಲ್ಲಿ ತ್ಯಾಗಿ ಸುಮಾರು 40 ಎಕರೆಗೂ ಮಿಕ್ಕಿದ ಪ್ರದೇಶದಲ್ಲಿ ಆಶ್ರಮ ನಿರ್ಮಿಸಿಕೊಂಡಿದ್ದು ಇದಕ್ಕೆ ತಾಗಿಕೊಂಡಿರುವ 2 ಎಕರೆ ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದ ಜಿಲ್ಲಾಡಳಿತ, ಅತಿಕ್ರಮಣ ತೆರವುಗೊಳಿಸುವಂತೆ ಆಶ್ರಮದ ಆಡಳಿತ ಕಚೇರಿಗೆ ಸೂಚಿಸಿತ್ತು. ಆದರೆ ಇದಕ್ಕೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ, ರವಿವಾರ ಪೊಲೀಸ್ ಭದ್ರತೆಯೊಂದಿಗೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದೆ.

ಈ ಮಧ್ಯೆ, ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆಗೆ ತ್ಯಾಗಿ ಮತ್ತು 6 ಸಹಚರರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ನಾಮದೇವ್ ತ್ಯಾಗಿ, 2019ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News