ನ. 26ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಬಿಸಿಯೂಟ ನೌಕರರಿಂದ ಪ್ರತಿಭಟನೆ
ಮಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ನ. 26ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು, ಬಿಸಿಯೂಟ ನೌಕರರು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದರು.
ಇಂದು ರಾಜ್ಯವ್ಯಾಪಿ ನಡೆದ ಪ್ರತಿಭಟನೆ ಭಾಗವಾಗಿ ಮಂಗಳೂರಿನ ಮಿನಿ ವಿಧಾನ ಸೌಧದ ಮುಂದುಗಡೆ ಪ್ರತಿಭಟನಾ ಪ್ರಧರ್ಶನ ನಡೆಸಲಾಯಿತು. ಸಿಐಟಿಯುನ ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ ಬಿಸಿಯೂಟ ನೌಕರರರಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ದುಡಿದಿರುವ ದಿನಗಳ ವೇತನ ಪಡೆಯಬೇಕಾದರೂ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ವೇತನ ಏರಿಕೆ ಆಗಬೇಕು, ಸಾಮಾಜಿಕ ಭದ್ರತೆ ಒದಗಿಸಬೇಕು. ಸ್ಕೀಂ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣೆಸಬೇಕು ಎಂದು ಹಲವಾರು ಹಂತದ ಹೋರಾಟ ನಡೆಸಿ ದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಬದಲಾಗಿ ಎಲ್ಲಾ ರಂಗಗಳನ್ನು ಖಾಸಗೀಕರಿಸಲಾಗುತ್ತಿದೆ. ನಿರುದ್ಯೋಗ ಸಮಸ್ಯೆ ಗಗನಕ್ಕೆ ಮುಟ್ಟಿದೆ. ವಿದ್ಯುತ್ ದರಿ ಏರಿಕೆ, ಪ್ರಯಾಣ ದರ, ಅಡುಗೆ ಅನಿಲ ದರ, ಅಗತ್ಯ ವಸ್ತುಗಳ ದರ ಏರಿಸಲಾಗಿದೆ. ಕಾರ್ಮಿಕ ಕಾನೂನು, ರೈತರ ಕಾನೂನಗಳನ್ನು ಕಾರ್ಪೋರೇಟ್ ಸಂಸ್ಥೆಗಳ ಪರ ತಿದ್ದುಪಡಿ ಮಾಡಲಾಗುತ್ತಿದೆ. ದೇಶ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಕಾರ್ಮಿಕ ಸಂಘಟನೆಗಳು ನ. 26ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಎಲ್ಲಾ ವಿಭಾಗದ ಜನತೆ ಯಶಸ್ವಿಗೊಳಿಸ ಬೇಕೆಂದು ಕರೆ ನೀಡಿದರು.
ಪ್ರಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ಪದ್ಮಾವತಿ ಶೆಟ್ಟಿ, ಜೆಎಸ್ಎಸ್ ನ ಮುಂದಾಳು ಭಾರತಿ ಬೋಳಾರ ರವರು ಮಾತನಾಡಿದರು. ಪ್ರಾರಂಭದಲ್ಲಿ ಗಿರಿಜರವರು ಸ್ವಾಗತಿಸಿ, ಭವ್ಯರವರು ವಂದಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ, ತಾಲೂಕು ಆಹಾರ ಅಧಿಕಾರಿಗಳಿಗೆ , ಡಿಡಿಪಿಐ ಯವರಿಗೆ ಮನವಿ ನೀಡಲಾಯಿತು. ಪ್ರದರ್ಶನದ ನೇತ್ರತ್ವವನ್ನು ರೇಖಲತಾ, ರತ್ನಮಾಲಾ, ಆಶಾ, ಶೋಭಾ, ಲಲಿತಾ, ಅರುಣ, ಉಮಾವತಿ, ಯಶೋಧಾ, ಚಂಚಲಾಕ್ಷಿ, ವಿಶಾಲಾಕ್ಷಿ ಮುಂತಾದವರು ವಹಿಸಿದ್ದರು.