ಕರ್ತವ್ಯದ ವೇಳೆ ಮೋಜುಮಸ್ತಿ ಆರೋಪ; ಇಂಜಿನಿಯರ್ ಸೇರಿ ಆರು ಮಂದಿ ಅಮಾನತು
ಶಿವಮೊಗ್ಗ : ಕರ್ತವ್ಯದ ಅವಧಿಯಲ್ಲಿ ಸಮವಸ್ತ್ರ ಧರಿಸಿ ಅರೆನಗ್ನವಾಗಿ ಮೋಜು ಮಸ್ತಿಮಾಡಿರುವ ಕಿರಿಯ ಇಂಜಿನಿಯರ್ ಸೇರಿ ಆರು ಮಂದಿ ಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದಲ್ಲಿ ಕರ್ತವ್ಯ ಅವಧಿಯಲ್ಲಿಯೇ ಸಮವಸ್ತ್ರದಲ್ಲಿ ಮೋಜು ಮಸ್ತಿ ಮಾಡಿದ ವಿಡಿಯೋ ವೈರಲ್ ಆಗಿತ್ತು. ಕಿರಿಯ ಎಂಜಿನಿಯರ್ ಚಂದ್ರಶೇಖರ್ ರಾಠೋಡ್, ಸಹಾಯಕ ಉಗ್ರಾಣ ಪಾಲಕ ಎಸ್.ಎ. ರವಿ, ಶಿಕಾರಿಪುರ ಪಟ್ಟಣ ಶಾಖೆಯ ಪವರ್ ಮ್ಯಾನ್ ಪಿ.ಎಲ್. ವಿನಯ್ ಕುಮಾರ್, ಹೊಸೂರು ಶಾಖೆಯ ಲೈನ್ ಮ್ಯಾನ್ ಎಲ್. ಸುರೇಶ್, ಶಿಕಾರಿಪುರ ಪಟ್ಟಣ ಶಾಖೆಯ ಲೈನ್ ಮ್ಯಾನ್ ಟಿ. ಮಹೇಶ್ವರಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ನ. 4ರಂದು ಶಿಕಾರಿಪುರದ ಅಂಜನಾಪುರ ಜಲಾಶಯದಲ್ಲಿ ಸಿಬ್ಬಂದಿ ಅರೆ ನಗ್ನರಾಗಿ ಕುಣಿದು ಕುಪ್ಪಳಿಸಿದ್ದಲ್ಲದೇ ಭಯ ಹುಟ್ಟಿಸುವಂತೆ ಬೈಕ್ ಕೂಡ ಓಡಿಸಿದ್ದಾರೆ. ಕಂಪೆನಿಯ ಗೌರವ, ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.