ವಿದ್ಯಾರ್ಥಿಗಳಿಗೆ 1000 ಟ್ಯಾಬ್, 500 ಲ್ಯಾಪ್‌ಟಾಪ್; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನತಾಣ ಕಾರ್ಯಕ್ರಮ
ಮಂಗಳೂರು, ನ.9: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನತಾಣ ಕಾರ್ಯಕ್ರಮದಂಗವಾಗಿ ದ.ಕ. ಜಿಲ್ಲೆಯಲ್ಲಿ 1000 ಟ್ಯಾಬ್ ಹಾಗೂ 500 ಲ್ಯಾಪ್‌ಟಾಪ್‌ಗಳನ್ನು ಒದಗಿಸಲಾಗುತ್ತಿದೆ. ಇದರಂಗವಾಗಿ ನಗರದ ಫಳ್ನೀರ್‌ನ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನಾ ಕಚೇರಿ ಯಲ್ಲಿ ಮಂಗಳೂರಿನ ಆಯ್ದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ಗಳನ್ನು ವಿತರಿಸಲಾಯಿತು.
ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಯಾವುದೇ ಅಂತರ್ಜಾಲ ರಹಿತ ವಾಗಿ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಪೂರಕವಾದ ಈ ಜ್ಞಾನತಾಣ ಕಾರ್ಯಕ್ರಮ ಗ್ರಾಮೀಣ ವಿದ್ಯಾರ್ಥಿಗಳಿಗೆ ದೊಡ್ಡ ಶಕ್ತಿ ಎಂದರು.
ಕೊರೋನದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಲ್ಲಿಯೇ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲೆ ಆರಂಭದ ಕುರಿತಂತೆ ಸರಕಾರದಿಂದ ಈವರೆಗೂ ಯಾವುದೇ ರೀತಿಯ ಅಂತಿಮ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪೂರಕವಾಗಿ ನೀಡಲಾಗುತ್ತಿರುವ ಲ್ಯಾಪ್‌ಟಾಪ್ ಹಾಗೂ ಟ್ಯಾಬ್‌ಗಳು ಸಾಕಷ್ಟು ಮಂದಿಗೆ ನೆರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಕೊರೋನದ ಈ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣ ಅನಿರ್ವಾಯ. ಆದರೆ ಕನ್ನಡ ಮಾಧ್ಯಮದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಂತರ್ಜಾಲ ಇಲ್ಲದೆ ಕಲಿಕೆ ಬಹಳ ತ್ರಾಸದಾಯಕವಾಗಿರುವುದರಿಂದ ಈ ಯೋಜನೆ ಅತ್ಯಂತ ಪರಿಣಾಮಕಾರಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ.ದ.ಗ್ರಾ.ಯೋ.ಬಿ.ಸಿ. ಟ್ರಸ್ಟ್‌ನ ನಿರ್ದೇಶಕ ಸತೀಶ್ ಶೆಟ್ಟಿ, ಮಂಗಳೂರಿನಲ್ಲಿ 100 ಟ್ಯಾಬ್‌ಗಳು ಹಾಗೂ 50 ಲ್ಯಾಪ್‌ಟಾಪ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದರು. ಇದೇ ವೇಳೆ ಜನಮಂಗಳ ಕಾರ್ಯಕ್ರಮಡಿ ತಾಲೂಕಿನ ನಾಲ್ಕು ವಿಕಲಚೇತನ ಫಲಾನುಭವಿಗಳಿಗೆ ಗಾಲಿಕುರ್ಚಿ ಮಂಜೂರುಗೊಂಡಿದ್ದು, ಸಾಂಕೇತಿಕವಾಗಿ ಓರ್ವರಿಗೆ ಇಂದು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ಕೇಂದ್ರ ಒಕ್ಕೂಟ ಪ್ರಗತಿಬಂಧು ಸ್ವಸಹಾಯ ಸಂಘದ ಅಧ್ಯಕ್ಷ ಸತೀಶ್, ಒಕ್ಕೂಟದ ಉಪಾಧ್ಯಕ್ಷೆ ಹೇಮಾ ಉಪಸ್ಥಿತರಿದ್ದರು.
ದ.ಕ.ದ.ಗ್ರಾ.ಯೋ.ಬಿ.ಸಿ. ಟ್ರಸ್ಟ್‌ನ ಯೋಜನಾಧಿಕಾರಿ ನಾಗೇಶ್ ಪಿ. ಸ್ವಾಗತಿಸಿದರು. ಮೇಲ್ವಿಚಾರಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನತಾಣ ಕಾರ್ಯಕ್ರಮದಡಿ ರಾಜ್ಯದಲ್ಲಿ ಆರಂಭದಲ್ಲಿ 5ರಿಂದ 10ನೆ ತರಗತಿವರೆಗಿನ ವಿದ್ಯಾರ್ಥಿಗಳಿಗೆ 20000 ಟ್ಯಾಬ್‌ಗಳನ್ನು ಹಾಗೂ ಪದವಿ ವಿದ್ಯಾರ್ಥಿಗಳಿಗೆ 10,000 ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾ ಗುತ್ತಿದೆ. ರಾಜ್ಯದ 176 ಯೋಜನಾ ಕಚೇರಿಗಳ ಮೂಲಕ ಈ ಕಾರ್ಯಕ್ರಮ ನಡೆಯುತ್ತಿದ್ದು, 6000 ರೂ.ಗಳಿಗೆ 17000 ರೂ. ಮೌಲ್ಯದ ಕಲಿಕಾ ಕಿಟ್ (ಟ್ಯಾಬ್) ಹಾಗೂ ಪದವಿ ವಿದ್ಯಾರ್ಥಿಗಳಿಗೆ 32,000 ರೂ. ಮೌಲ್ಯದ ಲ್ಯಾಪ್‌ಟಾಪನ್ನು 24000 ರೂ.ಗಳ ಸಹಾಯಧನದಲ್ಲಿ ನೀಡಲಾಗು ತ್ತಿದೆ. ಟ್ಯಾಬಿನ ಜತೆಗೆ ನೀಡಲಾಗುವ ಎಸ್‌ಡಿ ಕಾರ್ಡ್‌ನಲ್ಲಿ 5ರಿಂದ 10ನೆ ತರತಿವರೆಗಿನ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಪಾಠಗಳು ಶಿಕ್ಷಕರು ಮಾಡಿದಂತೆ ಲಭ್ಯವಿದ್ದು, ಒಂದು ಟ್ಯಾಬಿನಲ್ಲಿ ಆರು ತರಗತಿಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾಗಿದೆ.
ಪ್ರಿಲೋಡೆಡ್ ಪಠ್ಯವಾಗಿರುವುದರಿಂದ ಅಂತರ್ಜಾಲ, ವೈಫೈಅಥವಾ ಸಿಮ್ ಕಾರ್ಡಿನ ಅಗತ್ಯವಿರುವುದಿಲ್ಲ. ಪಾಠಗಳು ಕನ್ನಡ ಮಾಧ್ಯಮದಲ್ಲಿ ಮಾತ್ರವೇ ಲಭ್ಯವಿದೆ. ಟ್ಯಾಬ್‌ಗೆ ದೂರವಾಣಿ ಕರೆ ಮಾಡಲು ಸಾಧ್ಯವಿದ್ದು, ಸಿಮ್ ಕಾರ್ಡ್ ಕೂಡಾ ಅಳವಡಿಸಬಹುದಾಗಿದೆ. ರಾಜ್ಯದಲ್ಲಿ ಏಕಕಾಲ ದಲ್ಲಿ ಇಂದು ಸಂಸ್ಥೆಯ ಯೋಜನಾ ಕಚೇರಿಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಕಾರ್ಯಕ್ರಮದ ಸಮರ್ಪಕ ಅನುಷ್ಠಾನ ಕ್ಕಾಗಿ 450 ಗೌರವ ಶಿಕ್ಷಕರನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗುತ್ತಿದ್ದು, ಶಿಕ್ಷಕರಿಗೆ ಗೌರವ ಧನವನ್ನು ಸಂಸ್ಥೆ ವತಿಯಿಂದ ನೀಡಲಾಗುತ್ತದೆ. ಪ್ರಥಮ ವರ್ಷದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದ್ದು, 81 ಕೋಟಿ ರೂ.ಳನ್ನು ವಿನಿಯೋಗ ಮಾಡಲಾಗುತ್ತಿದೆ.
- ಸತೀಶ್ ಶೆಟ್ಟಿ, ನಿರ್ದೇಶಕರು, ದ.ಗ್ರಾ.ಯೋ.ಬಿ.ಸಿ. ಟ್ರಸ್ಟ್, ದ.ಕ.