ಆಸ್ಟ್ರೇಲಿಯ ವಿರುದ್ದ ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ಸೇರ್ಪಡೆ

Update: 2020-11-09 12:09 GMT

ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಿದ ಬಳಿಕ ಭಾರತದ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಬಿಸಿಸಿಐ ಸೋಮವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯು ದೃಢಪಡಿಸಿದೆ. ಆದರೆ, ರೋಹಿತ್ ರನ್ನು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಂದ ವಿಶ್ರಾಂತಿ ನೀಡಲಾಗಿದೆ. ಕೇರಳದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ರನ್ನು ಏಕದಿನ ತಂಡಕ್ಕೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಸೇರಿಸಿಕೊಳ್ಳಲಾಗಿದೆ.

ಅಕ್ಟೋಬರ್ ನಲ್ಲಿ ನಡೆದ ತಂಡದ ಆಯ್ಕೆ ಸಮಿತಿಯ ಸಭೆಯ ವೇಳೆ ಕೊಹ್ಲಿ ಅವರು ಆಸ್ಟ್ರೇಲಿಯದಿಂದ ವಾಪಸ್ ಬರುವ ಕುರಿತು ತಿಳಿಸಿದ್ದರು. ಕೊಹ್ಲಿಗೆ ರಜೆಯನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ 2021ರ  ಜನವರಿ ಮೊದಲ ವಾರ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಿದೆ.

ಐಪಿಎಲ್ ವೇಳೆ ಗಾಯಾಳುಗೊಂಡಿದ್ದ ರೋಹಿತ್ ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಪ್ರಕಟಿಸಲಾಗಿರುವ ಏಕದಿನ ಹಾಗೂ ಟಿ-20 ತಂಡಗಳಿಂದ ಹೊರಗಿಡಲಾಗಿದೆ. ರೋಹಿತ್ ಫಿಟ್ನೆಸ್ ಗಮನಿಸುತ್ತಿರುವ ಬಿಸಿಸಿಐ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಕಲ್ಪಿಸಿದೆ.

ಐಪಿಎಲ್ ನಲ್ಲಿ 4 ಲೀಗ್ ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಅಂತಿಮ ಲೀಗ್ ಪಂದ್ಯದಲ್ಲಿ ತಂಡಕ್ಕೆ ವಾಪಸಾಗಿದ್ದರು. ಡೆಲ್ಲಿ ವಿರುದ್ಧ ಕ್ವಾಲಿಫೈಯರ್-1 ಪಂದ್ಯದಲ್ಲಿ ಆಡಿದ್ದರು. ನವೆಂಬರ್ 10ರಂದು ನಡೆಯಲಿರುವ ಫೈನಲ್ ನಲ್ಲಿ ಮುಂಬೈಇಂಡಿಯನ್ಸ್ ತಂಢವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News