ಸಾಂತ್ಯಾರು ಮಠದ ಜೀರ್ಣೋದ್ಧಾರಕ್ಕೆ ಶ್ರಮದಾನ
ಉಡುಪಿ, ನ.9: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಶಾಖಾ ಮಠವಾದ ಪೆರ್ಡೂರು ಸಮೀಪದ ಸಾಂತ್ಯಾರು ಮಠವು ಜೀರ್ಣಾವಸ್ಥೆ ಯಲ್ಲಿದ್ದು, ಪ್ರಸ್ತುತ ಶೀರೂರು ಮಠದ ಉಸ್ತುವಾರಿ ವಹಿಸಿಕೊಂಡಿರುವ ಸೋದೆ ಶ್ರೀವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ನೇತೃತ್ವದಲ್ಲಿ ಊರ ಪರವೂರ ಗ್ರಾಮಸ್ಥರ ಸಹಕಾರದಿಂದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ.
ಇದರ ಅಂಗವಾಗಿ ಶ್ರೀಮಠದ ನೂತನ ಕಟ್ಟದ ಅಡಿಪಾಯ ನಿರ್ಮಾಣ ಕಾರ್ಯ ಸಾರ್ವಜನಿಕರ ಶ್ರಮದಾನದಿಂದ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ನೆರೆದವರನ್ನುದ್ದೇಶಿಸಿ ಮಾತನಾಡಿದ ಶ್ರೀ ವಿಶ್ವ ವಲ್ಲಭತೀರ್ಥರು, ಬರುವ ಹನುಮಜ್ಜಯಂತಿಯ ಒಳಗಾಗಿ ಮಠದ ಪುನರ್ನಿಮಾಣವನ್ನು ಪೂರೈಸಿ ಶ್ರೀಗೋಪಾಲಕೃಷ್ಣ, ಮುಖ್ಯಪ್ರಾಣ ಹಾಗೂ ಶಕ್ತಿದೇವತನೆಗಳ ಪುನ:ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿಸುವ ಸಂಕಲ್ಪ ಮಾಡಲಾಗಿದೆ. ಇದಕ್ಕೆ ಊರವರ, ಗ್ರಾಮಸ್ಥರ ಹಾಗೂ ಮಠದ ಭಕ್ತರ ಸಹಕಾರ ಅಗತ್ಯ ಎಂದರು.
ಇದೇ ವೇಳೆ ಮಾತನಾಡಿದ ಊರಿನ ಪ್ರಮುಖರಾದ ಜಿಯಾನಂದ ಹೆಗ್ಡೆ ಹಾಗೂ ಸತೀಶ್ ಶೆಟ್ಟಿ, ಇಂಥ ಸತ್ಕಾರ್ಯಕ್ಕೆ ಊರವರ ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೋದೆ ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ, ರತ್ನಕುಮಾರ್, ಶೀರೂರು ಮೂಲ ಮಠದ ಸುಬ್ರಹ್ಮಣ್ಯ ಭಟ್, ಊರ ಪ್ರಮುಖರಾದ ನಂದಕುಮಾರ್, ಕೃಷ್ಣಮೂರ್ತಿ ರಾವ್, ಹರೀಶ್ ಕುಲಾಲ್, ಗಣಪತಿ ಉಪಾಧ್ಯಾಯ, ಸಂತೋಷ್ ಶೆಟ್ಟಿ, ಗಣೇಶ್, ಹರೀಶ್ ಶೇರ್ವೆಗಾರ್, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.