'ಕೋರೆಗಾಂವ್ ಗಲಭೆ ಹಿನ್ನೆಲೆಯಲ್ಲಿ ಬಂಧಿತರ ಬಿಡುಗಡೆ ಆಗ್ರಹ'
ಉಡುಪಿ, ನ.9: 2018ರಲ್ಲಿ ಭೀಮ ಕೋರೆಗಾಂವ್‌ನಲ್ಲಿ ನಡೆದ ಗಲಭೆಯ ಹಿನ್ನೆಲೆಯಲ್ಲಿ ಈಗಾಗಲೇ ಬಂಧಿಸಿರುವ 16 ಮಂದಿಯನ್ನು ಕೂಡಲೇ ಬಿಡು ಗಡೆ ಮಾಡಬೇಕು. ಇದಕ್ಕೆ ಪೂರಕವಾದ ವಿಎಪಿಎ ಹಾಗೂ ಎನ್‌ಐಎಗಳು ಜನವಿರೋಧಿಯಾಗಿದ್ದು, ಇವುಗಳನ್ನು ಕೂಡಲೇ ವಾಪಾಸ್ಸು ಪಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಚಾಲಕ ಡಾ.ಆರ್.ಮೋಹನ್‌ರಾಜ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.7 ಮತ್ತು 8ರಂದು ಉಡುಪಿಯಲ್ಲಿ ನಡೆದ ದಸಂಸ ಭೀಮವಾದ ರಾಜ್ಯ ಸಮಿತಿ ಸಭೆಯಲ್ಲಿ ಈ ಕುರಿತು ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂವಿಧಾನದ ಆಶಯಗಳ ಉಳಿವಿಗಾಗಿ ಡಾ.ಅಂಬೇಡ್ಕರ್, ಭಾರತ ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡಿದ ದಿನವಾದ ನ.26ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಬಂದ್‌ಗೆ ದಸಂಸ ಭೀಮವಾದ ರಾಜ್ಯ ಸಮಿತಿಯು ಸಂಪೂರ್ಣ ಬೆಂಬಲ ನೀಡುತ್ತದೆ. ಜನ ವಿರೋಧಿ ಭೂಸುಧಾರಣಾ ಕಾಯಿದೆಗೆ ತಂದಿರುವ ತಿದ್ದುಪಡಿಯನ್ನು ವಾಪಾಸ್ಸು ಪಡೆಯಬೇಕು. ಇದರಿಂದ ಕೃಷಿ ಕ್ಷೇತ್ರಕ್ಕೆ ಬಹಳ ದೊಡ್ಡ ಪೆಟ್ಟು ಬೀಳಲಿದೆ ಎಂದು ಅವರು ಟೀಕಿಸಿದರು.
ಕರ್ನಾಟಕ ರಾಜ್ಯ ಸರಕಾರ ಕೂಡಲೇ ಸದಾಶಿವ ಆಯೋಗದ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಬೇಕು. ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ವರದಿಯಂತೆ ಮೀಸಲಾತಿಯನ್ನು ಹೆಚ್ಚಿಸಬೇಕು. ಹಿಂದುಳಿದವರ್ಗಗಳ ಕಾಂತರಾಜ್ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಕರ್ನಾಟಕ ರಾಜ್ಯ ಸರಕಾರ ಸರಕಾರಿ ನೌಕರರ ವಿರುದ್ಧ ತಂದಿರುವ ಸೇವಾ ನಿಯಮ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ವಾಪಾಸ್ಸು ಪಡೆಯೇಕು ಎಂದು ಅವರು ಆಗ್ರಹಿಸಿದರು.
ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿರುವ ಡಿಸಿ ಮನ್ನಾ ಭೂಮಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಕೂಡಲೇ ಭೂಮಿಯನ್ನು ಹಂಚಿಕೆ ಮಾಡಬೇಕು. ಉಡುಪಿ ಜಿಲ್ಲೆಯಲ್ಲಿ ಹಿರಿಯ ಭೂವಿಜ್ಞಾನಿ ರಾಣ್ ಜಿ. ನಾಯಕ್ ಅವಧಿಯಲ್ಲಿ ಎಲ್ಲ ಅಕ್ರಮ ಕಲ್ಲುಪುಡಿ ಮಾಡುವ ಘಟಕಗಳು ಹಾಗೂ ಕಲ್ಲು ಕೋರೆಗಳಿಗೆ ನೀಡಲಾದ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಾಜು ಎಂ.ತಳವಾರ್, ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ರಾಜ್ಯ ಪ್ರಧಾನ ಕಾರ್ಯ ದರ್ಶಿ ಡಾ.ಕೆ.ಎ.ಓಬಳೇಶ್, ರಾಜ್ಯ ಸಮಿತಿ ಸದಸ್ಯ ನಾಗೇಶ್ ಕೆ. ಶೆಟ್ಟಿ, ಜಿಲ್ಲಾ ಸಂಚಾಲಕ ಭರತ್ ಎಸ್.ಹಾವಂಜೆ ಉಪಸ್ಥಿತರಿದ್ದರು.