ಮಂಗಳೂರಲ್ಲಿ ಟ್ರಾಫಿಕ್ ಜಾಮ್: ಶಾಸಕ ಕಾಮತ್ ತುರ್ತು ಸಭೆ

Update: 2020-11-09 16:05 GMT

ಮಂಗಳೂರು, ನ. 9: ಮಂಗಳೂರು ನಗರದಲ್ಲಿ ಸ್ಮಾರ್ಟ್ ಯೋಜನೆಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಂಟಾದ ಟ್ರಾಫಿಕ್ ಜಾಮ್ ಸಮಸ್ಯೆಯ ಕುರಿತು ಶಾಸಕ ವೇದವ್ಯಾಸ್ ಕಾಮತ್ ತಕ್ಷಣವೇ ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳು, ಕೆಯುಡಿಎಫ್‌ಸಿ ಇಲಾಖೆಯ ಅಧಿಕಾರಿಗಳು ಹಾಗೂ ಬಸ್ ಮಾಲಕರ ಸಂಘದ ಅಧ್ಯಕ್ಷರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಪಿವಿಎಸ್ ಜಂಕ್ಷನ್‌ನಿಂದ ನೇರವಾಗಿ ಕೆ.ಎಸ್. ರಾವ್ ರಸ್ತೆಗೆ ತೆರಳಲು ಅವಕಾಶ ಕಲ್ಪಿಸಿ ಕೊಡಬೇಕು. ಕೆ.ಎಸ್. ರಾವ್ ರಸ್ತೆಯಿಂದ ಹಳೆಯ ಸರ್ವಿಸ್ ಬಸ್ ಸ್ಟಾಂಡ್, ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ (ಲೈಟ್‌ಹೌಸ್ ಹಿಲ್ ರಸ್ತೆ) ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಅದೇ ರೀತಿ ಕೆ.ಎಸ್. ರಾವ್ ರಸ್ತೆಯ ಮೂಲಕ ಬರುವ ವಾಹನಗಳು ವಿ.ಟಿ. ರಸ್ತೆಗೆ ತಿರುಗಲು ಹಾಗೂ ಶರವು ದೇವಸ್ಥಾನ ರಸ್ತೆಯಿಂದ ಜಿ.ಎಚ್.ಎಸ್ ರಸ್ತೆಯ ಮೂಲಕ ಕ್ಲಾಕ್ ಟವರ್ ತೆರಳಲು ಅವಕಾಶ ಕಲ್ಪಿಸಿ ಕೊಡಬೇಕು. ಸ್ಟೇಟ್ ಬ್ಯಾಂಕ್ ಪರಿಸರದಿಂದ ಬರುವ ವಾಹನಗಳಿಗೆ ಹಂಪನಕಟ್ಟೆ, ಕೆ.ಎಸ್. ರಾವ್ ರಸ್ತೆ, ಯೆನೆಪೊಯ ಆಸ್ಪತ್ರೆಯ ಮೂಲಕ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಅಥವಾ ಕೆ.ಎಸ್. ರಾವ್ ರಸ್ತೆ ಯಿಂದ ಹಳೇ ಸರ್ವಿಸ್ ಬಸ್ ಸ್ಟಾಂಡ್ ಮೂಲಕ ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯ ಮೂಲಕ ಹೋಗಲು ಅವಕಾಶ ನೀಡಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಅದೇ ರೀತಿ ಶಾರದಾ ವಿದ್ಯಾಲಯ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪ್ರಗತಿ ಹಂತದಲ್ಲಿ ರುವ ಬಂದರ್ ಪ್ರದೇಶದಲ್ಲಿ ರಾತ್ರಿಯ ವೇಳೆ ಕಾಮಗಾರಿ ನಡೆಸಿ ಹಗಲು ಹೊತ್ತಿನಲ್ಲಿ ಸಂಚಾರಕ್ಕೆ ತೊಡಕಾಗದಂತೆ ಕಾರ್ಯ ನಿರ್ವಹಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಂಗಳವಾರದಿಂದ ಜನರಿಗೆ ಸಮಸ್ಯೆಯಾಗದಂತೆ ಮತ್ತು ಟ್ರಾಫಿಕ್ ಸಮಸ್ಯೆ ಉದ್ಭವಿ ಸದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೂ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತರ ಪ್ರೇಮಾನಂದ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಶೆಟ್ಟಿ ಬೋಳೂರು, ಪೂರ್ಣಿಮಾ ಎಂ., ಸಹಾಯಕ ಆಯುಕ್ತ ಮದನ್ ಮೋಹನ್, ಸಂಚಾರ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ನಟರಾಜ್, ಸಂಚಾರ ಪಶ್ಚಿಮ ಪೊಲೀಸ್ ಠಾಣೆ ನಿರೀಕ್ಷಕ ಜಯಾನಂದ, ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಕೆಯುಡಿಎಫ್‌ಸಿ ಅಧಿಕಾರಿಗಳು, ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News