ಬಿಹಾರ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು: ಸಿಇಸಿ, ಇತರರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

Update: 2020-11-09 16:30 GMT

ಹೊಸದಿಲ್ಲಿ,ನ.9: ಬಿಹಾರ ವಿಧಾನಸಭಾ ಚುನಾವಣೆಗಾಗಿ ತಮ್ಮ ಅಭ್ಯರ್ಥಿಗಳ ಅಪರಾಧ ಇತಿಹಾಸವನ್ನು ಪ್ರಕಟಿಸುವ ಕುರಿತು ನ್ಯಾಯಾಲಯದ ನಿರ್ದಿಷ್ಟ ಸೂಚನೆಗಳನ್ನು ಕಡೆಗಣಿಸಿದ್ದಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಮತ್ತು ಕೆಲವು ಪ್ರಮುಖ ರಾಜಕಾರಣಿಗಳ ವಿರುದ್ಧ ದಿಲ್ಲಿಯ ವಕೀಲ ಬೃಜೇಶ್ ಸಿಂಗ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಅರೋರಾ ಜೊತೆ ಬಿಹಾರದ ಮುಖ್ಯ ಚುನಾವಣಾಧಿಕಾರಿ ಎಚ್.ಆರ್.ಶ್ರೀನಿವಾಸ,ಜೆಡಿಯು ಪ್ರ.ಕಾರ್ಯದರ್ಶಿ ಕೆ.ಸಿ.ತ್ಯಾಗಿ,ಆರ್‌ಜೆಡಿಯ ರಾಜ್ಯಾಧ್ಯಕ್ಷ ಜಗದಾನಂದ ಸಿಂಗ್,ಎಲ್‌ಜೆಪಿ ನಾಯಕ ಅಬ್ದುಲ್ ಖಾಲಿಕ್,ಕಾಂಗ್ರೆಸ್ ನಾಯಕ ಆರ್.ಎಸ್.ಸುರ್ಜೆವಾಲಾ ಮತ್ತು ಬಿಜೆಪಿಯ ಬಿ.ಎಲ್.ಸಂತೋಷ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

  ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಇತಿಹಾಸವನ್ನು ಪ್ರಕಟಿಸುವಂತೆ ಸರ್ವೋಚ್ಚ ನ್ಯಾಯಾಲಯವು 2020,ಫೆ.13ರಂದು ರಾಜಕೀಯ ಪಕ್ಷಗಳಿಗೆ ನೀಡಿದ್ದ ನಿರ್ದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಎಂದು ಸಿಂಗ್ ಅರ್ಜಿಯಲ್ಲಿ ಬೆಟ್ಟು ಮಾಡಿದ್ದಾರೆ. ತಮ್ಮ ಅಭ್ಯರ್ಥಿಗಳ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳನ್ನು ತಮ್ಮ ಜಾಲತಾಣಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸುವಂತೆ ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು. ಆದಾಗ್ಯೂ ಭಾರೀ ಸಂಖ್ಯೆಯ ಅಭ್ಯರ್ಥಿಗಳು ಕ್ರಿಮಿನಲ್ ಚಟುವಟಿಕೆಗಳ ಆರೋಪಿಗಳಾಗಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶವು ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಪಕ್ಷಗಳ ಮೇಲೆ ಯಾವುದೇ ಪರಿಣಾಮವನ್ನು ಬೀರಿರುವಂತೆ ಕಂಡು ಬಂದಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ ಶೇ.34ರಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಅವು ತಮ್ಮ ಹಿಂದಿನ ಚಾಳಿಯನ್ನೇ ಮುಂದುವರಿಸಿವೆ ಎಂದು ತನ್ನ ವರದಿಯಲ್ಲಿ ಹೇಳಿದ್ದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್),ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ವಿವರಗಳನ್ನು ಕೇವಲ ಒಂದು ಹಿಂದಿ ದೈನಿಕದಲ್ಲಿ ಪ್ರಕಟಿಸಿವೆ ಎಂದು ಬೆಟ್ಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News